ಯಾವುದೇ ಗೊಂದಲವಾಗಲೀ, ತಕರಾರಾಗಲೀ ಇಲ್ಲದೆ ಶನಿವಾರ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಇ–ಹರಾಜು ಪ್ರಕ್ರಿಯೆ ಸರಾಗವಾಗಿ ನಡೆಯಿತು.
ಶುಕ್ರವಾರ ರೀಲರುಗಳು ಇ–ಹರಾಜು ಬೇಡ, ಬಹಿರಂಗ ಹರಾಜು ನಡೆಸಿ ಎಂದು ಪಟ್ಟುಹಿಡಿದು, ಹರಾಜಿನಲ್ಲಿ ಪಾಲ್ಗೊಳ್ಳದಿದ್ದುದರಿಂದ ಹಲವಾರು ರೈತರು ರೇಷ್ಮೆ ಗೂಡನ್ನು ವಾಪಸ್ ತೆಗೆದುಕೊಂಡು ಹೋಗುವ ಪರಿಸ್ಥಿತಿ ಮೂಡಿತ್ತು. ತಹಶೀಲ್ದಾರ್ ಮನೋರಮಾ ಅವರು ರೀಲರುಗಳೊಂದಿಗೆ ಚರ್ಚಿಸಿ ತಾತ್ಕಾಲಿಕವಾಗಿ ಬಹಿರಂಗ ಹರಾಜನ್ನು ನಡೆಸಿದ್ದರೂ ಬಹುತೇಕ ರೈತರು ಬೇಸರಗೊಂಡು ತಮ್ಮ ರೇಷ್ಮೆ ಗೂಡನ್ನು ವಾಪಸ್ ತೆಗೆದುಕೊಂಡು ಹೋಗಿದ್ದರು. ತುರ್ತು ಸಭೆ ನಡೆಸಿದ್ದ ರೈತರು ಇ–ಹರಾಜು ನಡೆಸದಿದ್ದಲ್ಲಿ ಸೋಮವಾರದಿಂದ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಬಂದ್ ಮಾಡುವುದಾಗಿ ಘೋಷಿಸಿದ್ದರು.
ಈ ಹಿನ್ನೆಲೆಯಲ್ಲಿ ಶನಿವಾರ ರೇಷ್ಮೆ ಗೂಡಿನ ಮಾರುಕಟ್ಟೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಅಚ್ಚರಿಯೆಂಬಂತೆ ಹಿಂದಿನ ಯಾವ ಘಟನೆಯೂ ಆಗಿಲ್ಲವೆಂಬಂತೆ ಇ–ಹರಾಜು ಸುಗಮವಾಗಿ ಶನಿವಾರ ನಡೆಯಿತು. ಸುಮಾರು 370 ಲಾಟ್ ರೇಷ್ಮೆ ಗೂಡನ್ನು ಮಾರುಕಟ್ಟೆಗೆ ತರಲಾಗಿತ್ತು. 200 ಮಂದಿ ರೀಲರುಗಳು ತಮ್ಮ ಮೊಬೈಲ್ ಬಳಸಿ ಇ–ಹರಾಜಿನಲ್ಲಿ ಅಷ್ಟೂ ರೇಷ್ಮೆ ಗೂಡನ್ನು ಕೊಂಡರು.
‘16,497 ಕೆಜಿ ರೇಷ್ಮೆ ಗೂಡನ್ನು ಇ–ಹರಾಜಿನ ಮೂಲಕ ಯಾವುದೇ ತೊಂದರೆಗಳಿಲ್ಲದೆ ರೀಲರುಗಳು ಕೊಂಡರು. ಗರಿಷ್ಠ 432 ರೂಗಳಾದರೆ ಕನಿಷ್ಠ 200 ರೂಗಳಾಯಿತು. ಸರಾಸರಿ 375 ರೂಗಳಂತೆ ರೇಷ್ಮೆ ಗೂಡು ಹರಾಜಾಯಿತು. ನಿನ್ನೆಯ ಗೊಂದಲದಿಂದ ಈ ದಿನ ಕಡಿಮೆ ಲಾಟ್ ರೇಷ್ಮೆ ಗೂಡನ್ನು ತಂದಿದ್ದರು. ಸುಗಮವಾಗಿ ಇ–ಹರಾಜು ನಡೆದಿದ್ದರಿಂದ ನಾಳೆಯಿಂದ ಎಂದಿನಂತೆ 800 ರಿಂದ 900 ಲಾಟ್ ಗೂಡು ಆವಕವಾಗುವ ನಿರೀಕ್ಷೆಯಿದೆ’ ಎಂದು ರೇಷ್ಮೆ ಗೂಡು ಮಾರುಕಟ್ಟೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ ತಿಳಿಸಿದರು.
- Advertisement -
- Advertisement -
- Advertisement -
- Advertisement -