Home News ಸಮಾಜದಲ್ಲಿ ಸಮಾನತೆ ಬಹು ಮುಖ್ಯ

ಸಮಾಜದಲ್ಲಿ ಸಮಾನತೆ ಬಹು ಮುಖ್ಯ

0

ಸಮಾಜದ ಎಲ್ಲಾ ವರ್ಗದ ಜನತೆಯು ಸಮಾನತೆಯಿಂದ ಬದುಕಲು ಬೇಕಾದ ಪರಿಸ್ಥಿತಿ ನಿರ್ಮಾಣವಾಗಬೇಕು ಎಂದು ಶೂದ್ರಶಕ್ತಿ ಸಮಿತಿಯ ಅಧ್ಯಕ್ಷ ಬಿ.ಆರ್.ರಾಮೇಗೌಡ ಹೇಳಿದರು.
ನಗರದ ಕೋಟೆ ವೃತ್ತದಲ್ಲಿರುವ ಸೋಮೇಶ್ವರ ದೇವಾಲಯದ ಆವರಣದಲ್ಲಿ ಶನಿವಾರ ಶೂದ್ರಶಕ್ತಿ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಸಂಕ್ರಾಂತಿ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಪ್ರತಿನಿತ್ಯ ಶೋಷಣೆಗೊಳಪಡುತ್ತಿರುವ ಶೂದ್ರಶಕ್ತಿಗಳು ಒಂದಾಗುವುದರೊಂದಿಗೆ ಮನುಸಂಸ್ಕೃತಿಯ ಅಂಶಗಳ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದರು.
ಭಾರತ ದೇಶದಲ್ಲಿ ಹುಟ್ಟಿಬೆಳೆದಿರುವ ನಮಗೆ ವೇದಗಳನ್ನು ಕಲಿಯುವಂತಹ ಸ್ವಾತಂತ್ರ್ಯವಿಲ್ಲವೆ. ಒಕ್ಕಲಿಗ, ಲಿಂಗಾಯಿತ, ಕುರುಬ, ಕುಂಬಾರ, ಬಣಜಿಗ, ಗೊಲ್ಲ, ಬೇಡ, ಬೆಸ್ತ, ಅಗಸ, ನಾಯಿಂದ, ಇಡಿಗ, ತಿಗಳ, ದಲಿತ, ಗಿರಿಜನ, ಕೊರಚ, ಬೋವಿ, ಉಪ್ಪಾರ, ನೇಕಾರ, ಕೊರಮ, ವಡ್ಡ, ಬಂಜಾರ ಮರಾಠ ಮುಂತಾದವರೆಲ್ಲರೂ ಶೂದ್ರರೇ ಆಗಿದ್ದು, ಅವರವರ ಕಸುಬುಗಳಿಗೆ ಅನುಗುಣವಾಗಿ ಜಾತಿಗಳನ್ನು ವಿಭಜಿಸಲಾಗಿದೆ. ಹಾಗಾಗಿ ಈ ಸತ್ಯವನ್ನು ಅರ್ಥಮಾಡಿಕೊಂಡು ಪ್ರತಿಯೊಬ್ಬ ನಾಗರಿಕರು ಸಮಾನತೆಯ ಜೀವನ ನಡೆಸುವಂತಾಗಬೇಕು ಎಂದರು.
ಪಶು ಸಂಗೋಪನಾ ಇಲಾಖೆಯ ಅಡಿಷನಲ್ ಡೈರೆಕ್ಟರ್ ಚಲುವಯ್ಯ ಮಾತನಾಡಿ, ಸತತ ಬರಗಾಲದಿಂದಾಗಿ ರೈತರ ಸುಗ್ಗಿಯ ಹಬ್ಬವಾದ ಸಂಕ್ರಾಂತಿ ಹಬ್ಬ ಇತ್ತೀಚೆಗೆ ಕಳೆಯನ್ನು ಕಳೆದುಕೊಳ್ಳುತ್ತಿದೆ. ಈ ಭಾಗದ ರೈತರು ನೀರಿನ ಕೊರತೆಯಿಂದಾಗಿ ವ್ಯವಸಾಯ ಮಾಡಲಾಗದೇ ಅತ್ತ ನಗರಗಳ ಕಡೆ ವಲಸೆ ಹೋಗಲಾಗದ ಅತಂತ್ರ ಸ್ಥಿತಿಯಲ್ಲಿದ್ದು, ರೈತರ ಉಳಿವಿಗಾಗಿ ಪಶುಸಂಗೋಪನೆ ಸಹಕಾರಿಯಾಗಿದೆ. ಪಶುಸಂಗೋಪನೆಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನ ಅತ್ಯುತ್ತಮ ರೈತರೆಂದು ಸೊಣ್ಣೇನಹಳ್ಳಿಯ ನರಸಿಂಹಪ್ಪ ಹಾಗು ಅಮೂರು ತಿಮ್ಮನಹಳ್ಳಿಯ ಆಂಜಿನಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಮುನಿಕೃಷ್ಣಪ್ಪ, ನಂದಿನಿ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಗುಡಿಯಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಕೆಂಪರೆಡ್ಡಿ, ಹಿತ್ತಲಹಳ್ಳಿ ಗೋಪಾಲಗೌಡ, ನಾರಾಯಣಸ್ವಾಮಿ, ಶೂದ್ರಶಕ್ತಿ ಸಮಿತಿಯ ಗೋವಿಂದರಾಜು ಮತ್ತಿತರರು ಹಾಜರಿದ್ದರು.