ಸತತ ಧ್ಯಾನಾಭ್ಯಾಸದಿಂದ ನಿತ್ಯ ಜೀವನದ ಒತ್ತಡಗಳು, ಆಯಾಸ, ನೋವು ದೂರವಾಗುವವು. ಕೋಪ, ಅಸಹನೆ, ಭಯ ದೂರವಾಗಿ ತಾಳ್ಮೆ ಹೆಚ್ಚಾಗುವುದು. ಮನಸ್ಸಿಗೆ ನೆಮ್ಮದಿ ದೊರೆಯುವುದು ಎಂದು ಮಳ್ಳೂರು ಪಿಳ್ಳವೆಂಕಟಸ್ವಾಮಪ್ಪ ತಿಳಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಭಾನುವಾರ ಸಂಜೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸೇವಾ ಕೇಂದ್ರದ 14ನೇ ವಾರ್ಷಿಕೋತ್ಸವ ಹಾಗೂ ಹೊಸ ಕಟ್ಟಡಕ್ಕೆ ಸೇವಾ ಕೇಂದ್ರದ ಸ್ಥಳಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧ್ಯಾನ ಮಾಡುವುದರಿಂದ ಮನಸ್ಸಿನ ಹಾಗೂ ಅಂತಃಕರಣಗಳ ಚಂಚಲತೆ ನಿವಾರಣೆಯಾಗಿ ಮನಸ್ಸಿಗೆ ಆಳ ವಿಶ್ರಾಂತಿ ದೊರೆಯುತ್ತದೆ. ಏಕಾಗ್ರತೆ, ಗ್ರಹಿಸುವ ಶಕ್ತಿ ಮತ್ತು ಜ್ಞಾಪಕ ಶಕ್ತಿ ಹೆಚ್ಚಾಗುವುದು. ಆತ್ಮಸ್ಥೈರ್ಯ ಹೆಚ್ಚುವುದು. ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಲಭಿಸುವುದು. ಉತ್ತಮ ಸಾಮಾಜಿಕ ನಡವಳಿಕೆ ಮತ್ತು ಸಮಯ ಪ್ರಜ್ಞೆ ಮೂಡುವುದು ಎಂದು ವಿವರಿಸಿದರು.
ದಿಬ್ಬೂರಹಳ್ಳಿ ಚಿಕ್ಕಪ್ಪಯ್ಯಣ್ಣ ಮಾತನಾಡಿ, ಗೀತಾ ಸಾರದ ಬಗ್ಗೆ ಪ್ರತಿದಿನ ನಡೆಸುವ ತರಗತಿಗಳಲ್ಲಿ ಭಾಗವಹಿಸುವುದರಿಂದ ನಿತ್ಯ ಜೀವನದ ಸಮಸ್ಯೆಗಳನ್ನು ಎದುರಿಸಲು ಪರಿಹಾರೋಪಾಯಗಳು ಸಿಗುತ್ತವೆ. ಒತ್ತಡದ ಜೀವನವನ್ನು ಎದುರಿಸುವ ಆತ್ಮಸ್ಥೈರ್ಯ ಗೀತೆಯ ಸಾರದಲ್ಲಿ ಸಿಗುತ್ತದೆ. ಮೇಲೂರು ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಈ ಗೀತಾ ಸಾರ ಕಾರ್ಯಕ್ರಮವನ್ನು ಪ್ರತಿದಿನ ಸಂಜೆ 7 ರಿಂದ 8 ಗಂಟೆಯವರೆಗೂ ನಡೆಸುತ್ತಿದ್ದು, ಸಾಕಷ್ಟು ಮಂದಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಶಿಡ್ಲಘಟ್ಟ ಸೇವಾ ಕೇಂದ್ರದ ಸಂಚಾಲಕಿ ಜಯಕ್ಕ, ದಿಬ್ಬೂರಹಳ್ಳಿ ಅಶ್ವತ್ಥರೆಡ್ಡಿ, ಮೇಲೂರು ಮಂಜುನಾಥ್, ತೋಟಗಾರಿಕಾ ಇಲಾಖೆಯ ರಮೇಶ್, ಮಂಜುನಾಥ, ಎಂ.ಎ.ರಾಮಕೃಷ್ಣ, ಅನಿಲ್ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -