ತಾಲ್ಲೂಕಿನಲ್ಲಿ ರೇಷ್ಮೆ ಕೃಷಿಕರು ಸಂಕಷ್ಟದಲ್ಲಿದ್ದಾರೆ. ಅತ್ಯಂತ ಕಡಿಮೆ ನೀರಿನಲ್ಲಿ ಬೆಳೆ ತೆಗೆಯಬೇಕಾದ ಪರಿಸ್ಥಿತಿಯಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಶೀಗೆಹಳ್ಳಿ ಗ್ರಾಮದಲ್ಲಿ ರೇಷ್ಮೆ ಇಲಾಖೆ ಮತ್ತು ಜಿಲ್ಲಾ ಪಂಚಾಯತಿ ವತಿಯಿಂದ ಬುಧವಾರ ನಡೆದ ರೇಷ್ಮೆ ಕೃಷಿ ದ್ವಿತಳಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ತಾಂತ್ರಿಕತೆಗಳ ಜ್ಞಾನವನ್ನು ಪಡೆದು ಉತೃಷ್ಟವಾದ ಗುಣಮಟ್ಟದ ರೇಷ್ಮೆ ಬೆಳೆ ಬೆಳೆಯುವ ಅನಿವಾರ್ಯತೆಯಿದೆ. ಸರ್ಕಾರ ಅನುದಾನಗಳನ್ನು ಹಾಗೂ ವಿವಿಧ ಸೌಲಭ್ಯಗಳನ್ನು ಒದಗಿಸಬೇಕಿದೆ. ವಿಜ್ಞಾನಿಗಳು ಹೆಚ್ಚಿನ ಸಂಶೋಧನೆಗಳನ್ನು ನಡೆಸಿ ಭಾರತ ಚೀನಾ ರೇಷ್ಮೆಗೆ ಪೈಪೋಟಿ ನೀಡುವಂತೆ, ನಮ್ಮ ರೈತರು ಅಂತಾರಾಷ್ಟ್ರೀಯ ಗುಣಮಟ್ಟದ ರೇಷ್ಮೆಯನ್ನು ಉತ್ಪಾದಿಸಲು ಬೇಕಾದ ತಳಿಗಳನ್ನು ಅಭಿವೃದ್ಧಿಪಡಿಸಬೇಕು. ಕೃಷಿಯನ್ನೇ ನಂಬಿ, ಅದರಲ್ಲೂ ರೇಷ್ಮೆ ಕೃಷಿಯ ಮೇಲೆ ಅವಲಂಬಿತ ಲಕ್ಷಾಂತರ ಮಂದಿಯ ಬದುಕು ಹಸನಾಗಲು ಸಾಕಷ್ಟು ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಹಮ್ಮಿಕೊಳ್ಳಬೇಕಾಗಿದೆ. ರೇಷ್ಮೆ ಹುಳು ಸಾಕಾಣಿಕಾ ಮನೆಗಳ ಸಂಖ್ಯೆ ಹೆಚ್ಚಿಸಿ ಅದಕ್ಕಾಗಿ ನೀಡುವ ಸಹಾಯಧನವನ್ನೂ ಹೆಚ್ಚಿಸಬೇಕು ಎಂದು ಹೇಳಿದರು.
ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತ ಜಿ.ಸತೀಶ್ ಮಾತನಾಡಿ, ರಾಜ್ಯದಲ್ಲಿ ರೇಷ್ಮೆ ಕೃಷಿಯನ್ನು ಮಾಡುತ್ತಿರುವ 85 ಸಾವಿರ ಮಂದಿಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೇ 66 ಸಾವಿರ ಮಂದಿಯಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ 180 ಕೋಟಿ ಬರುತ್ತಿದೆ. ಅದು ಸಾಲದಾಗಿದ್ದು, ಇನ್ನೂ ಹೆಚ್ಚಿನ ಅನುದಾನದ ಅಗತ್ಯವಿದೆ ಎಂದು ಹೇಳಿದರು.
ದ್ವಿತಳಿ ರೇಷ್ಮೆ ಗೂಡನ್ನು ಉತೃಷ್ಟವಾಗಿ ಬೆಳೆದಿರುವ ಶೀಗೆಹಳ್ಳಿ ನಾರಾಯಣಸ್ವಾಮಿ ಅವರ ರೇಷ್ಮೆ ಗೂಡುಗಳು, ಹುಳುಗಳಿರುವ ಚಂದ್ರಂಕಿಯನ್ನು ಪ್ರದರ್ಶಸಲಾಗಿತ್ತು.
ಉತ್ತಮ ರೇಷ್ಮೆ ಬೆಳೆ ಬೆಳೆಯುತ್ತಿರುವ ರೈತರಾದ ಮುನಿಯಮ್ಮ, ನಾರಾಯಣಸ್ವಾಮಿ, ಕೋಗಿಲಪ್ಪ, ವೆಂಕಟೇಶಪ್ಪ ಮತ್ತು ರೀಲರುಗಳಾದ ಮೆಹಬೂಬ್‌ಖಾನ್, ರಾಮಚಂದ್ರಪ್ಪ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ತಲಘಟ್ಟಪುರ ರೇಷ್ಮೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ.ಸುಕುಮಾರ್, ಡಾ.ತಿಮ್ಮರೆಡ್ಡಿ, ಡಾ.ಎನ್.ಆರ್.ಪ್ರಸಾದ್, ಡಾ.ಹೇಮಾನಂದರೆಡ್ಡಿ, ಡಾ.ಸತೀಶ್‌ವರ್ಮ, ಡಾ.ಫಣಿರಾಜ್ ಹಿಪ್ಪುನೇರಳೆ ತೋಟದ ನಿರ್ವಹಣೆ ಮತ್ತು ರೇಷ್ಮೆ ಬೆಳೆಯ ಸಂರಕ್ಷಣೆ ಕುರಿತಂತೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತಿ ಸದಸ್ಯರಾದ ಎಸ್.ಎಂ.ನಾರಾಯಣಸ್ವಾಮಿ, ಶಿವಲೀಲಾ ರಾಜಣ್ಣ, ಕೆ.ಎಂ.ಎಫ್. ನಿರ್ದೇಶಕ ಬಂಕ್ ಮುನಿಯಪ್ಪ, ಸೂರ್ಯನಾರಾಯಣಗೌಡ, ಸಹಕಾರ ಸಂಘದ ಶಿವಣ್ಣ, ಕೇಂದ್ರ ರೇಷ್ಮೆ ಮಂಡಳಿ ಸದಸ್ಯರಾದ ಆರ್.ಕೆ.ರಾಮಕೃಷ್ಣಪ್ಪ, ಯಲುವಳ್ಳಿ ರಮೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಆಂಜನಮ್ಮ, ಸದಸ್ಯೆ ಪಿ.ನೇತ್ರ, ರೇಷ್ಮೆ ಉಪನಿರ್ದೇಶಕ ಬಿ.ಆರ್.ನಾಗಭೂಷಣ, ಜಂಟಿ ನಿರ್ದೇಶಕರಾದ ಪ್ರಭಾಕರ್, ರಾಜಣ್ಣ, ಉಪನಿರ್ದೇಶಕ ಎಂ.ನರಸಿಂಹಮೂರ್ತಿ, ಸಹಾಯಕ ನಿರ್ದೇಶಕ ಚಂದ್ರಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -