ಬೆಳೆಗಳಿಗೆ ಹಾನಿಯಾಗದ ರೀತಿಯಲ್ಲಿ ಧೂಳು ಏಳದಂತೆ ರಾಜ್ಯ ರಸ್ತೆ ಹೆದ್ದಾರಿ ಕಾಮಗಾರಿ ಶೀಘ್ರವಾಗಿ ಮುಗಿಸುವುದಾಗಿ ಎಂಜಿನಿಯರ್ ರಾಮಚಂದ್ರರೆಡ್ಡಿ ರೈತರಿಗೆ ಭರವಸೆಯನ್ನು ನೀಡಿದರು.
ನಗರದ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿಯಲ್ಲಿ ಮಂಗಳವಾರ ನಡೆದ ರೈತರು ಹಾಗೂ ಹೆದ್ದಾರಿ ವಿಭಾಗದ ಎಂಜಿನಿಯರ್ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ವಾರ ಶಿಡ್ಲಘಟ್ಟ- ಚಿಂತಾಮಣಿ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ರಸ್ತೆಯ ಧೂಳಿನಿಂದ ಅಕ್ಕಪಕ್ಕದ ರೈತರ ತೋಟಗಳಲ್ಲಿನ ಬೆಳೆ ನಾಶವಾಗುತ್ತಿದೆ ಎಂದು ಆರೋಪಿಸಿ ತಾಲ್ಲೂಕಿನ ಸೊಣ್ಣೇನಹಳ್ಳಿ ಗೇಟ್ ಬಳಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಸಹಯೋಗದಲ್ಲಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಠಾಣೆಗೆ ಕರೆಸಿ ರೈತರೊಂದಿಗೆ ಸಮಸ್ಯೆಯ ಬಗೆಗೆ ಚರ್ಚಿಸುವುದಾಗಿ ತಿಳಿಸಿದ್ದರು.
ಆದಷ್ಟು ಬೇಗ ಕಾಮಗಾರಿ ಪೂರೈಸಲಾಗುವುದು. ಧೂಳು ಎದ್ದೇಳದಂತೆ ಕ್ರಮ ಕೈಗೊಳ್ಳುವುದಾಗಿ ಎಂಜಿನಿಯರ್ ಭರವಸೆ ನೀಡಿದರು. ಆದರೆ ರೈತರು, ಕೆರೆ ಮಣ್ಣನ್ನು ತಂದು ರಸ್ತೆಗೆ ಸುರಿದ ಕಾರಣ ರಸ್ತೆಯೆಲ್ಲಾ ಧೂಳುಮಯವಾಗಿ ಹಗಲಿನಲ್ಲೂ ದೀಪ ಉರಿಸಿಕೊಂಡು ಸಾಗಬೇಕಾಗಿದೆ. ಶಿಡ್ಲಘಟ್ಟ ಮತ್ತು ಚಿಂತಾಮಣಿಯ ನಡುವಿನ ಈ ಕೆಟ್ಟ ಕಾಮಗಾರಿಯಿಂದಾಗಿ ಈಗಾಗಲೇ ಹಲವು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಹಲವಾರು ಮಂದಿ ಬಿದ್ದು ಗಾಯಗೊಂಡಿದ್ದಾರೆ. ಈಗ ಆಗಿರುವ ನಷ್ಟಕ್ಕೆ ಪರಿಹಾರವನ್ನು ನೀಡಬೇಕೆಂದು ಪಟ್ಟುಹಿಡಿದರು.
ಹೆದ್ದಾರಿ ಕಾಮಗಾರಿಯಿಂದ ರೈತರಿಗೆ ಈಗಾಗಲೇ ಆಗಿರುವ ನಷ್ಟವನ್ನು ಗುತ್ತಿಗೆದಾರರಿಗೆ ವಿವರಿಸಿ ಅವರಿಂದ ಸೂಕ್ತ ಪರಿಹಾರವನ್ನು ಕೊಡಿಸಲು ಪ್ರಯತ್ನಿಸುವುದಾಗಿ ಎಂಜಿನಿಯರ್ ರಾಮಚಂದ್ರರೆಡ್ಡಿ ತಿಳಿಸಿದರು. ಸಬ್ ಇನ್ ಸ್ಪೆಕ್ಟರ್ ಪ್ರದೀಪ್ ಪೂಜಾರಿ, ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ಎಸ್.ಎಂ.ನಾರಾಯಣಸ್ವಾಮಿ, ಪ್ರಭಾಕರ್, ಗೋವಿಂದ, ರಾಮಾಂಜಿನಪ್ಪ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
- Advertisement -
- Advertisement -
- Advertisement -