Home News ಶಿಡ್ಲಘಟ್ಟ ತಾಲ್ಲೂಕಿನ ಲೇಖಕರ ಕೆಲ ಸಾಹಿತ್ಯ ಕೃತಿಗಳು

ಶಿಡ್ಲಘಟ್ಟ ತಾಲ್ಲೂಕಿನ ಲೇಖಕರ ಕೆಲ ಸಾಹಿತ್ಯ ಕೃತಿಗಳು

0

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸಾಹಿತ್ಯ ಅರಳಿದ್ದುದರ ಕುರುಹು ಇತಿಹಾಸದಲ್ಲಿ ಲಭ್ಯವಿದೆ. ತಾಲ್ಲೂಕಿನ ಕುಂದಲಗುರ್ಕಿ ಶಾಸನದಲ್ಲಿ ಹಿಂದೆ ಈ ಪ್ರದೇಶವನ್ನು ಅಗ್ರಹಾರ ರಾಮಸಮುದ್ರವೆಂದು ಕರೆಯಲ್ಪಡುತ್ತಿದ್ದು ಖ್ಯಾತ ಕಲಿಕಾ ಕೇಂದ್ರವಾಗಿತ್ತೆಂದು ಉಲ್ಲೇಖಿಸಲಾಗಿದೆ. 1830 ರಲ್ಲಿ ‘ಶ್ರೀ ಕೃಷ್ಣ ಭೂಪಾಲಿಯಮು’ ಎಂಬ ಕೃತಿಯನ್ನು ರಚಿಸಿದ್ದ ಚಂದ್ರಕವಿ ಕುಂದಲಗುರ್ಕಿಯವನು.
ಕವಿ, ಸಾಹಿತಿ, ಇತಿಹಾಸಕಾರ ಶಿಡ್ಲಘಟ್ಟದ ಅಬ್ದುಲ್ ಹಸನ್, ‘ಜವರುಲ್ ಬಾಲಘತ್’(ಛಂದೋಗ್ರಂಥ), ‘ಜವಾಹಿರ್–ಎ–ಉರ್ದು’(ವ್ಯಾಕರಣ ಗ್ರಂಥ), ‘ಫಾಜಿ–ಎ–ಅಜಮ್’(ಹೈದರ್ ಕುರಿತಾದ ಚಾರಿತ್ರಿಕ ಗ್ರಂಥ), ‘ರಾಜ್ ನಾಮ’(ಮೈಸೂರು ಒಡೆಯರ ಚರಿತ್ರೆ) ಮುಂತಾದ ಕೃತಿಗಳನ್ನು ಬರೆದಿದ್ದಾರೆ.
ಶಿಡ್ಲಘಟ್ಟದ ಕೃಷ್ಣರಾಯರು(1850–1910) ‘ವೇಣುಗೋಪಾಲ’ ಎಂಬ ಅಂಕಿತದಿಂದ ಸುಮಾರು 200 ಕೀರ್ತನೆಗಳನ್ನು ರಚಿಸಿದ್ದಾರೆ. ಗಂಜಿಗುಂಟೆಯ ಜಿ.ಎಸ್.ನರಸಿಂಹಮೂರ್ತಿಯವರ ಕೀರ್ತನೆಗಳ ಸಂಗ್ರಹ ‘ಕೀರ್ತನ ತರಂಗಿಣಿ’ಯಲ್ಲಿ ವಿಷ್ಣುಭಕ್ತಿ, ಭಾಗವತಜ್ಞಾನ, ಪಾಂಡಿತ್ಯಗಳನ್ನು ಗುರುತಿಸಲಾಗಿದೆ.
ಶಿಡ್ಲಘಟ್ಟ ತಾಲ್ಲೂಕು ಮುತ್ತೂರು ಗ್ರಾಮದ ನರಹರಿ ಶಾಸ್ತ್ರಿಗಳು ಹಾಗೂ ಅವರ ಮಗ ಪುರುಷೋತ್ತಮ ಶಾಸ್ತ್ರಿಗಳು ಸಂಸ್ಕೃತ ಪಂಡಿತರಾಗಿ ಆಸ್ಥಾನ ವಿದ್ವಾಂಸರಾಗಿದ್ದರು. ಇವರ ಮಗ ಖ್ಯಾತ ಶಿಕ್ಷಣ ತಜ್ಞ ಎಂ.ಪಿ.ಎಲ್ ಶಾಸ್ತ್ರಿ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಪಡೆದಿದ್ದು, ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಎಂ.ಇ.ಎಸ್ ವಿದ್ಯಾ ಸಂಸ್ಥೆಯ ಸ್ಥಾಪನಾ ಕಾರ್ಯದರ್ಶಿಗಳಾಗಿದ್ದರು. ಇವರು ರಚಿಸಿದ ಸುಭಾಷಿತ ಸಂಗ್ರಹಗಳು, ಸಂಸ್ಕೃತ ನಾಟಕಗಳು ಮತ್ತು ಅನೇಕ ಲೇಖನಗಳು ಪ್ರಕಟವಾಗಿದೆ. ಚಾಗೆ ಕೃಷ್ಣಮೂರ್ತಿ ಸಂಶೋಧಕರಾಗಿದ್ದು, ಹಲವಾರು ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಆನೂರು ಎ.ಎಂ.ಮುನೇಗೌಡರು 60ರ ದಶಕದಲ್ಲಿ ‘ರೇಷ್ಮೆ ಕೈಗಾರಿಕೆ’ ಎಂಬ ದ್ವೈಮಾಸಿಕ ಪತ್ರಿಕೆ ಹೊರತರುತ್ತಿದ್ದರು. ೧೬ ಪುಟಗಳ ಈ ಮಾಸಪತ್ರಿಕೆಯ ಎಲ್ಲಾ ಲೇಖನಗಳನ್ನೂ ಗೌಡರೇ ಬರೆಯುತ್ತಿದ್ದರು. ಕೆಲ ಲೇಖನಗಳು ಇಂಗ್ಲಿಷ್ ನಲ್ಲಿದ್ದರೆ, ಕೆಲ ಲೇಖನಗಳನ್ನು ಸಚಿತ್ರವಾಗಿಯೂ ಪ್ರಕಟಿಸುತ್ತಿದ್ದರು. ರೈತರ ಬದುಕಿನ ಬಗ್ಗೆ ಕಳಕಳಿ ಹೊಂದಿದ್ದ ಮುನೇಗೌಡರು ‘ಗ್ರಾಮೋದ್ಧಾರವಾಗುವುದೆಂದು?’ ಸೇರಿದಂತೆ ಕೆಲವು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದರು.
ಜಂಗಮಕೋಟೆಯ ಶ್ರೀನಿವಾಸರಾಯರು ಥಿಯಾಸಫಿಕಲ್ ಸೊಸೈಟಿಯ ಪ್ರಭಾವಕ್ಕೊಳಗಾಗಿ ೧೯೦೮ರಲ್ಲಿ ಕರ್ಮಎಂಬ ಕೃತಿ ರಚಿಸಿದ್ದು ೧೯೧೦ರಲ್ಲಿ ಅವರ ಧರ್ಮ ಕೃತಿಯನ್ನು ಮೈಸೂರಿನಿಂದ ಪ್ರಕಟಿಸಲಾಯಿತು.
ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಎಚ್.ವಿ.ರಾಮಚಂದ್ರರಾವ್ ‘ಕಬೀರನ ವಚನಗಳು’ ರಚಿಸಿದ್ದರೆ, ಹಾಸ್ಯ ಲೇಖಕ ಎನ್.ಎಸ್. ನರಸಿಂಹಮೂರ್ತಿ ಹಲವಾರು ಹಾಸ್ಯ ಲೇಖನಗಳನ್ನು ಪ್ರಕಟಿಸಿದ್ದಾರೆ. ತಾಲ್ಲೂಕಿನ ನಡಿಪಿನಾಯಕನಹಳ್ಳಿಯವರಾದ ಎನ್.ಆರ್.ನಾರಾಯಣ ಮೂರ್ತಿ ಇಂಗ್ಲೀಷ್ನಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಮೇಲೂರು ಎಂ.ಆರ್.ಪ್ರಭಾಕರ್ ಅವರು ತಮ್ಮ ಹಸ್ತಾಕ್ಷರದಲ್ಲಿ ‘ಅಂಚೆ ಜಾನಪದ’ ಪುಸ್ತಕ ರಚಿಸಿದ್ದು, ಕರ್ನಾಟಕ ಜಾನಪದ ಅಕಾಡೆಮಿ ಪ್ರಕಟಿಸಿದೆ. ಜನಪದ ತಜ್ಞ ಡಾ.ಶ್ರೀನಿವಾಸಯ್ಯ ಅವರ ಜನಪದ ಲೇಖನಗಳ ಸಂಗ್ರಹ ‘ತಣಿಗೆ’ ಕೃತಿಯಾಗಿದೆ.
ಮಲ್ಲಿಕಾರ್ಜುನ.ಡಿ.ಜಿ ಅವರ ಅರೆಕ್ಷಣದ ಅದೃಷ್ಟ, ಕ್ಲಿಕ್ ಕೃತಿಗಳು ಹೊರಬಂದಿವೆ. ಮೇಲೂರಿನ ರಾಜೀವಗೌಡ ಅವರ ಸಂಖ್ಯಾಲೋಕದಲ್ಲಿ ಅಲೆದಾಟ ಮತ್ತು ಪಾಬ್ಲೊ ನೆರೂಡ ಕೃತಿಗಳು, ಈಧರೆ ತಿರುಮಲ ಪ್ರಕಾಶ್ ಅವರ ಕವನ ಸಂಕಲನ ‘ಕತ್ತಲೆಗೊಂದು ಹೊಳೆವ ಮಿಂಚು’ ಪ್ರಕಟವಾಗಿವೆ. ಶಿಕ್ಷಕ ಎಸ್.ಕಲಾಧರ್ ಸಂಪಾದಿಸಿರುವ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಬರಹಗಳ ಸಂಕಲನ ‘ಶಾಮಂತಿ’ ಭವಿಷ್ಯದ ಸಾಹಿತ್ಯ ಕೃಷಿಗೆ ಭರವಸೆಯಂತಿದೆ.
–ಡಿ.ಜಿ.ಮಲ್ಲಿಕಾರ್ಜುನ.