ತಾಲ್ಲೂಕಿನ ಇಬ್ಬರು ಶಿಕ್ಷಕರು ಈ ಬಾರಿಯ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ತಾಲ್ಲೂಕಿನ ಉಪ್ಪಕುಂಟಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬುಡ್ಡೂಸಾಬಿ ಮತ್ತು ತಾಲ್ಲೂಕಿನ ಜಂಗಮಕೋಟೆಯ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಎಂ.ಎನ್. ಮಂಜುನಾಥ್ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆಯುತ್ತಿರುವ ಶಿಕ್ಷಕರು.
ಬುಡ್ಡೂಸಾಬಿ: ಗುಡಿಬಂಡೆ ತಾಲ್ಲೂಕಿನ ಸೋಮೇಶ್ವರ ಮೂಲದ ಬುಡ್ಡೂಸಾಬಿ ಅವರು 26 ವರ್ಷಗಳ ಸುಧೀರ್ಘ ಸೇವೆಯನ್ನು ತಾಲ್ಲೂಕಿನ ಮೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸಲ್ಲಿಸಿದ್ದಾರೆ. ದೇವನಾಯಕನಹಳ್ಳಿ, ಗಡಿಮಿಂಚೇನಹಳ್ಳಿ ಮತ್ತು ಉಪ್ಪುಕುಂಟಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕೆಲಸ ಮಾಡಿರುವ ಇವರು ಕಳೆದ 14 ವರ್ಷಗಳಿಂದ ಉಪ್ಪುಕುಂಟಹಳ್ಳಿಯಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ.
ಉಪ್ಪುಕುಂಟಹಳ್ಳಿಯ ಶಾಲೆಯ ಸ್ಥಳವನ್ನು ಗ್ರಾಮಸ್ಥರು ಹಾಗೂ ಹಿರಿಯ ವಿದ್ಯಾರ್ಥಿಗಳ ನೆರವಿನೊಂದಿಗೆ ಸರಿಪಡಿಸಿ ಕಾಂಪೌಡ್ ಹಾಕಿಸಿ ಗಿಡಗಳನ್ನು ನೆಟ್ಟು ನಂದನವನವನ್ನಾಗಿಸಿದ್ದಾರೆ. ಏಕೋಪಾಧ್ಯಾಯ ಶಾಲೆಯಾಗಿದ್ದಾಗ ಇವರಿದ್ದ ಶಾಲೆಗೆ ಮಕ್ಕಳಲ್ಲಿ ಶೈಕ್ಷಣಿಕ ಅಭಿವೃದ್ಧಿಗೊಳಿಸಿದ ಕಾರಣ ಉತ್ತಮ ಎಸ್ಡಿಎಂಸಿ ಮತ್ತು ಗುಣಾತ್ಮಕ ಶಿಕ್ಷಣ ಪ್ರಶಸ್ತಿ ಲಭಿಸಿದೆ. 2012–13ನೇ ಸಾಲಿನಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ಮಿತ್ರ ಜಿಲ್ಲಾ ಪ್ರಶಸ್ತಿ ವಿಭಾಗದಲ್ಲಿ ‘ಕಿತ್ತಳೆ ಶಾಲೆ’ ಪ್ರಶಸ್ತಿ ಲಭಿಸಿದೆ. ಶಾಲೆಗೆ ಬೇಕಾದ ಗೇಟ್, ಧ್ವಾರ, ಕುಡಿಯುವ ನೀರು, ಧ್ವಜಸ್ಥಂಭ, ನಲಿಕಲಿ ಕೊಠಡಿ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳ ನೆರವು ಪಡೆದು ಮಾಡಿಸಿರುವುದು ಇವರ ಹೆಗ್ಗಳಿಕೆ.
ಎಂ.ಎನ್. ಮಂಜುನಾಥ್: ತಾಲ್ಲೂಕಿನ ಮೇಲೂರು ಮೂಲದ ಎಂ.ಎನ್.ಮಂಜುನಾಥ್, ಚಿಕ್ಕಬಳ್ಳಾಪುರದ ಸರ್ಕಾರಿ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ಸಿಪಿಇಡಿ ವ್ಯಾಸಂಗ ಮಾಡಿ 1995 ರಲ್ಲಿ ತಾಲ್ಲೂಕಿನ ಜಂಗಮಕೋಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿದರು. 21 ವರ್ಷಗಳಿಂದ ಅಲ್ಲಿಯೇ ಕಾರ್ಯನಿರ್ವಹಿತ್ತಿದ್ದಾರೆ.
ಭರ್ಜಿ ಎಸೆತದಲ್ಲಿ ರಾಜ್ಯಮಟ್ಟವನ್ನು ಇವರ ಶಿಷ್ಯರು ಪ್ರತಿನಿಧಿಸಿದ್ದರು. ವಿಭಾಗಮಟ್ಟದಲ್ಲಿ ರಾಮನಗರ ಮತ್ತು ಚಿತ್ರದುರ್ಗದಲ್ಲಿ ಇವರಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ವಾಲಿಬಾಲ್ ಆಡಿದ್ದರು. ಪ್ರತಿಭಾ ಕಾರಂಜಿಯಲ್ಲಿ ಆರು ಭಾರಿ ಇವರ ತಂಡ ರಾಜ್ಯಮಟ್ಟದಲ್ಲಿ ಭಾಗವಹಿಸಿದ್ದಾರೆ. ಕೋಲಾಟ ಮತ್ತು ಜಾನಪದ ನೃತ್ಯ ಪ್ರಕಾರದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಉಡುಪಿ, ಗುಲ್ಭರ್ಗಾ, ಬಿಜಾಪುರ, ಬಾಗಲಕೋಟೆ, ಮಂಡ್ಯಾ, ದೊಡ್ಡಬಳ್ಳಾಪುರಗಳಲ್ಲಿ ಇವರಿಂದ ತರಬೇತಿ ಪಡೆದವರು ಭಾಗವಹಿಸಿ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.
- Advertisement -
- Advertisement -
- Advertisement -
- Advertisement -