ಸಾಧಕರು ಎಲ್ಲೇ ಇದ್ದು ಸಾಧನೆ ಮಾಡಿದರೂ ಅವರ ಹುಟ್ಟೂರು ಸಂಭ್ರಮಿಸುತ್ತದೆ. ಹುಟ್ಟೂರಿನೊಂದಿಗೆ ತಳುಕು ಹಾಕಿಕೊಂಡ ಅವರ ಹೆಸರಿನಿಂದ ‘ನಮ್ಮ ಊರಿನವರು ಈ ಸಾಧನೆ ಮಾಡಿದ್ದಾರೆ’ ಎಂದು ಊರಿನವರು ಹೆಮ್ಮೆ ಪಡುತ್ತಾರೆ. ಈ ರೀತಿ ಊರಿನ ನಂಟನ್ನು ಹೆಸರಲ್ಲಿ ಇಟ್ಟುಕೊಂಡು ದೂರದೂರುಗಳಲ್ಲಿದ್ದುಕೊಂಡೇ ಸಾಧನೆ ಮಾಡಿರುವವರನ್ನು ಹುಟ್ಟೂರಿಗೆ ಕರೆಸಿ ಗೌರವಿಸುವ ಕೆಲಸ ಅಲ್ಲಲ್ಲಿ ನಡೆಯುತ್ತದೆ.
ಶಿಡ್ಲಘಟ್ಟದಲ್ಲಿಯೂ ಈ ರೀತಿಯ ರಾಷ್ಟ್ರಮಟ್ಟದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಹುಟ್ಟಿದ ಊರಿನ ಘನತೆ ಗೌರವವನ್ನು ಹೆಚ್ಚಿಸಿರುವವರನ್ನು ಕರೆಸಿ ಇಂದು ಗೌರವಿಸಲಾಗುತ್ತಿದೆ. ಈ ಸಾಧಕರನ್ನು ಗೌರವಿಸುತ್ತಿರುವವರು ಶಿಡ್ಲಘಟ್ಟದಲ್ಲಿ ಹುಟ್ಟಿದ್ದ ಮತ್ತೊಬ್ಬ ಸಾಧಕ ಇನ್ಫೋಸಿಸ್ ಪ್ರವರ್ತಕ ಡಾ.ಎನ್.ಆರ್.ನಾರಾಯಣಮೂರ್ತಿ ಎಂಬುದು ಮತ್ತೊಂದು ವಿಶೇಷ.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಜನಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ.ಕೃಷ್ಣಮೂರ್ತಿ ವೆಂಕಟರಾಮ್, ಬಿ.ವಿ.ಪಾಂಡುರಂಗರಾವ್, ಎನ್.ಆರ್.ಸಮರ್ಥರಾಮ್, ಕ್ರಮಧಾತಿ ಶ್ರೀಧರ್, ಕ್ಯಾಪ್ಟನ್ ಸುನಿಲ್ ಕುಮಾರ್ ಅವರನ್ನು ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಇಂದು ಆಯೋಜಿಸಿರುವ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಗೌರವಿಸುತ್ತಿದ್ದಾರೆ.
ಡಾ.ಕೃಷ್ಣಮೂರ್ತಿ ವೆಂಕಟರಾಮ್:
ಶಿಡ್ಲಘಟ್ಟದ ಬ್ಯಾಂಕ್ ಕೃಷ್ಣಮೂರ್ತಿ ಹಾಗೂ ಮೀನಾಕ್ಷಮ್ಮರವರ ಮಗ 80 ವರ್ಷ ವಯಸ್ಸಿನ ಡಾ.ಕೃಷ್ಣಮೂರ್ತಿ ವೆಂಕಟರಾಮ್ ಎಸ್. ಎಸ್. ಎಲ್. ಸಿ ವರೆಗೂ ಓದಿದ್ದು ಶಿಡ್ಲಘಟ್ಟದಲ್ಲಿಯೇ. ಕೆನಡಾ ದೇಶದಲ್ಲಿ ಉನ್ನತ ವ್ಯಾಸಂಗ ಮಾಡಿ ಅಂತಾರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಪರಿಣಿತಿ ಎಂಬ ಪ್ರಬಂಧಕ್ಕೆ – ಡಾಲ್ಹೌಸಿ ವಿಶ್ವವಿದ್ಯಾಲಯದಿಂದ ಪಿ. ಹೆಚ್. ಡಿ. ಪದವಿ ಪಡೆದಿದ್ದಾರೆ. ಇಥಿಯೋಪಿಯ ಹಾಗೂ ಬ್ರಿಟಿಷ್ ದೇಶಗಳ ಸಂಬಂಧ ಹಾಗೂ ವಿದೇಶಾಂಗ ನೀತಿಗಳ ಸಂಶೋಧನೆ ನಡೆಸಲು ಇಥಿಯೋಪಿಯಾ, ಫ್ರಾನ್ಸ್, ಇಂಗ್ಲೆಂಡ್ ಹಾಗೂ ಇಟಲಿ ದೇಶಗಳ ವಿದೇಶಾಂಗ ಕಚೇರಿಗಳಲ್ಲಿ ಅಧ್ಯಯನ ಮಾಡಿದ್ದಲ್ಲದೆ, ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸುಮಾರು ೩೦ ವರ್ಷಗಳ ಕಾಲ ಇಥಿಯೋಪಿಯ, ಉಗಾಂಡ ಹಾಗೂ ಕೆನಡಾ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಿದ್ದಾರೆ. ಇಥಿಯೋಪಿಯ ಹಾಗೂ ಬ್ರಿಟಿಷ್ ದೇಶಗಳ ಸಂಬಂಧ ಕುರಿತು, ಜಗದ್ಗುರು ಚಂದ್ರಶೇಖರ ಸ್ವಾಮೀಜಿ ಬಗ್ಗೆ ಮತ್ತು ಪರಿವರ್ತನೆ ಎಂಬ ಪುಸ್ತಕಗಳನ್ನು ಬರೆದಿದ್ದಾರೆ.
ಬಿ.ವಿ.ಪಾಂಡುರಂಗರಾವ್:
ಶಿಡ್ಲಘಟ್ಟದ ಹಳೆಯ ಆಸ್ಪತ್ರೆ ಕ್ವಾಟರ್ಸ್ನಲ್ಲಿ ಬಾಲ್ಯವನ್ನು ಕಳೆದಿದ್ದ 70 ವರ್ಷ ವಯಸ್ಸಿನ ಬಿ.ವಿ.ಪಾಂಡುರಂಗರಾವ್, ಶಿಡ್ಲಘಟ್ಟದಲ್ಲಿ ವೈದ್ಯರಾಗಿದ್ದ ಡಾ.ಬಿ.ವೆಂಕಟರಾವ್ ಮತ್ತು ಇಂದಿರಾಬಾಯಿ ಅವರ ಮಗ. ಇವರು ಫ್ಲಿಪ್ ಬುಕ್ ಅನಿಮೇಷನ್ನಲ್ಲಿ 6 ಬಾರಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ 6 ಬಾರಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆ ಮಾಡಿದ್ದಾರೆ. ವಿಶ್ವದ ವಿವಿಧ ದೇಶಗಳು ನಡೆಸಿರುವ ವ್ಯಂಗ್ಯ ಚಿತ್ರ ಸ್ಪರ್ಧೆ ಮತ್ತು ಪ್ರದರ್ಶನಗಳಲ್ಲಿ ಇವರ ಚಿತ್ರಗಳು 53 ಬಾರಿ ಪ್ರಶಸ್ತಿಗೆ ಭಾಜನವಾಗಿವೆ. ದೇಶದ ಹಲವೆಡೆ ಏಕ ವ್ಯಕ್ತಿ ವ್ಯಂಗ್ಯ ಚಿತ್ರ ಪ್ರದರ್ಶನಗಳು ನಡೆದಿವೆ. 2011 ರಲ್ಲಿ ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರಿಂದ ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿದೆ. ಕರ್ನಾಟಕ ವ್ಯಂಗ್ಯ ಚಿತ್ರಕಾರರ ಸಂಘದ ಅಧ್ಯಕ್ಷರಾಗಿ, ರಾಜ್ಯ ಕ್ರಿಕೆಟ್ ಅಂಪೈರ್ ಆಗಿ ಮಧ್ಯಪ್ರದೇಶ ವಿಭಾಗ ಮತ್ತು ಅಖಿಲ ಭಾರತ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಎನ್.ಆರ್.ಸಮರ್ಥರಾಮ್:
ಶಿಡ್ಲಘಟ್ಟ ತಾಲ್ಲೂಕಿನ ನಾರಾಯಣದಾಸರಹಳ್ಳಿ ಗ್ರಾಮದ ರಾಮಣ್ಣ ಮತ್ತು ಸೀತಮ್ಮ ದಂಪತಿಗಳ ಮಗ 50 ವರ್ಷ ವಯಸ್ಸಿನ ಎನ್.ಆರ್.ಸಮರ್ಥರಾಮ್ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಭಾರತ ಸರ್ಕಾರದಲ್ಲಿ ಹಿರಿಯ ವಿಜ್ಞಾನಿಯಾಗಿ ರಾಜ್ಯ ಸರ್ಕಾರದ ಜನಸ್ನೇಹಿ ಯೋಜನೆಗಳಾದ ಭೂಮಿ, ನೆಮ್ಮದಿ, ಇ–ಸ್ವತ್ತು ಹಾಗೂ ಇ–ವಿನ್ಯಾಸಗಳನ್ನು ರೂಪಿಸಿ 2011 ರಲ್ಲಿ ಕೇಂದ್ರ ಸರ್ಕಾರದ ‘ಗೋಲ್ಡ್ ಐಕಾನ್’ ಪ್ರಶಸ್ತಿ ಪುರಸ್ಕೃತರು.
ಕ್ರಮಧಾತಿ ಶ್ರೀಧರ್:
ಶಿಡ್ಲಘಟ್ಟ ತಾಲ್ಲೂಕಿನ ದಡಂಘಟ್ಟ ಗ್ರಾಮದ ಕೃಷ್ಣಮೂರ್ತಿ ಮತ್ತು ಲೀಲಾವತಮ್ಮ ಅವರ ಮಗ 41 ವರ್ಷ ವಯಸ್ಸಿನ ಕ್ರಮಧಾತಿ ಶ್ರೀಧರ್ ಕಳಿಂಗ ವಿಶ್ವವಿದ್ಯಾನಿಲಯದಲ್ಲಿ ಆಡಳಿತ ವ್ಯವಹಾರಗಳ ಮೇಲೆ ಎಂ.ಬಿ.ಎ ಪದವಿ ಪಡೆದಿದ್ದಾರೆ. ಹಾಕಿನ್ ಕುಕ್ಕರ್ಸ್ ಲಿಮಿಟೆಡ್, ಗ್ರಿಂದ್ಲೇ ಬ್ಯಾಂಕ್ ಮತ್ತು ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ ಕಾರ್ಯನಿರ್ವಹಿಸಿ ಈಗ ಇಂಡಿಯಾ ಇನ್ಫೋಲೈನ್ ಲಿಮಿಟೆಡ್ ನಲ್ಲಿ ದಕ್ಷಿಣ ವಲಯ ಹಿರಿಯ ಉಪಾಧ್ಯಕ್ಷರಾಗಿದ್ದಾರೆ.
ಕ್ಯಾಪ್ಟನ್ ಸುನಿಲ್ ಕುಮಾರ್:
ಶಿಡ್ಲಘಟ್ಟ ತಾಲ್ಲೂಕಿನ ಮುತ್ತೂರು ಗ್ರಾಮದ ಎಂ.ಎಸ್.ವೆಂಕಟೇಶಮೂರ್ತಿ ಮತ್ತು ವಿಜಯಲಕ್ಷ್ಮಿ ಅವರ ಮಗ 28 ವರ್ಷದ ಕ್ಯಾಪ್ಟನ್ ಸುನಿಲ್ ಕುಮಾರ್, ಓದಿದ್ದು ಮಳ್ಳೂರಿನ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ. ಭಾರತೀಯ ಸೇನೆಯಲ್ಲಿ ಎಲೆಕ್ಟ್ರಿಕ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಪಂಚದ ಅತ್ಯಂತ ದುರ್ಗಮ ಕದನ ಪ್ರದೇಶ ಸಿಯಾಚಿನ್ನಲ್ಲಿ ಕಾರ್ಯನಿರ್ವಹಿಸಿರುವ ಇವರು ಕಾಶ್ಮೀರದಲ್ಲಿ ಭಯೋತ್ಪಾದಕರ ನಿಗ್ರಹ ದಳದಲ್ಲೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಇವರ ಕಾರ್ಯಕ್ಷೇತ್ರ ಜಾರ್ಖಂಡ್ನ ರಾಂಚಿಯಾಗಿದ್ದು, ಸಂಗೀತ, ಈಜು, ಟೇಬಲ್ ಟೆನ್ನಿಸ್ ಮುಂತಾದ ಹವ್ಯಾಸಗಳನ್ನು ಹೊಂದಿದ್ದಾರೆ.
–ಡಿ.ಜಿ.ಮಲ್ಲಿಕಾರ್ಜುನ.