ನಗರದ ಹಿಂದು ಮುಂದು ದೇವರೆಂದೆ ಪ್ರಸಿದ್ದಿಯಾದ ವೇಣುಗೋಪಾಲಸ್ವಾಮಿಯ ಬ್ರಹ್ಮರಥೋತ್ಸವವು ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ನಗರದಲ್ಲಿ ಬ್ರಹ್ಮರಥೋತ್ಸವ ನಡೆಯುವ ಏಕೈಕ ದೇವಾಲಯ ಇದಾಗಿದ್ದು ತಾಲ್ಲೂಕು ಆಡಳಿತ, ಶ್ರೀವೇಣುಗೋಪಾಲಸ್ವಾಮಿ ಸೇವಾ ಮತ್ತು ಅಭಿವೃದ್ದಿ ಟ್ರಸ್ಟ್‌ನ ಆಶ್ರಯದಲ್ಲಿ ಬ್ರಹ್ಮರಥೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ತಹಸೀಲ್ದಾರ್ ಅಜಿತ್ ಕುಮಾರ್ ರೈ ರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವದಲ್ಲಿ ಭಾಗವಹಿಸುವ ಎಲ್ಲ ಭಕ್ತರಿಗೂ ಆ ಭಗವಂತನ ಅನುಗ್ರಹ ದಯಪಾಲಿಸಲಿ ಎಂದು ಆಶಿಸಿದರು.
ಮಾಜಿ ಸಚಿವ ವಿ.ಮುನಿಯಪ್ಪ ಸೇರಿದಂತೆ ಅನೇಕ ಗಣ್ಯರು ರಥೋತ್ಸವದಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾದರು.
ರಥವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮಾರ್ಗದ ಉದ್ದಕ್ಕೂ ಸಾರಿಸಿ ರಂಗೋಲೆ ಹಾಕಿ ಸಿಂಗರಿಸಿ ಭಕ್ತ ಭಾವದಿಂದ ಭಗವಂತನನ್ನು ಬರಮಾಡಿಕೊಂಡು ಇಷ್ಟಾರ್ಥಗಳು ಈಡೇರಲೆಂದು ಭಗವಂತನಲ್ಲಿ ಪ್ರಾರ್ಥಿಸಿದರು. ನಗರದ ವಿವಿದೆಡೆ ಭಕ್ತರಿಗೆ ಕೆಲ ದಾನಿಗಳು ಸೌತೆಕಾಯಿ ಬೆರೆಸಿದ ಹೆಸರುಬೇಳೆ ಮತ್ತು ಪಾನಕವನ್ನು ವಿತರಿಸಿದರು.
ಶ್ರೀವೇಣುಗೋಪಾಲಸೇವಾ ಟ್ರಸ್ಟ್‌ನ ಅಧ್ಯಕ್ಷ ಬಳೆರಘು, ಎಲ್.ಮಧು, ಬಾಲಕೃಷ್ಣ, ಮಂಜುನಾಥ್, ರೂಪಸಿ ರಮೇಶ್, ರಾಮಚಂದ್ರಾಚಾರ್, ಮುನಿಕೃಷ್ಣಪ್ಪ, ಡಿ.ಎಂ.ಜಗದೀಶ್ವರ್, ಬಿ.ಸಿ.ನಂದೀಶ್, ಕೆಂಪರೆಡ್ಡಿ ಮತ್ತಿತರರು ಹಾಜರಿದ್ದರು.
‘ಶಿಡ್ಲಘಟ್ಟ ದೇವರು ಹಿಂದು ಮುಂದು’ ಎಂಬ ಪ್ರಸಿದ್ಧ ನಾಣ್ಣುಡಿಗೆ ಕಾರಣ ಶ್ರೀ ವೇಣುಗೋಪಾಲಸ್ವಾಮಿ ರಥೋತ್ಸವ. ಹಿಂದೆ ನಗರದ ಅಶೋಕರಸ್ತೆಯು ಕಿರಿದಾಗಿತ್ತು. ಆ ಕಾರಣಕ್ಕೆ ದೊಡ್ಡದಾದ ದೇವರ ರಥವನ್ನು ರಸ್ತೆ ಕೊನೆಯಲ್ಲಿ ತಿರುಗಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ದೇವರನ್ನೇ ಹಿಂದು ಮುಂದಾಗಿ ತಿರುಗಿಸಿ ರಥವನ್ನು ಹಿಂಬದಿಯಿಂದ ಎಳೆದು ತರಲಾಗುತ್ತಿತ್ತು. ಹೀಗಾಗಿ ‘ಶಿಡ್ಲಘಟ್ಟದ ದೇವರು ಹಿಂದು ಮುಂದು’ ಎಂಬ ಮಾತು ಚಾಲ್ತಿಗೆ ಬಂತು.
ಶ್ರೀಕೃಷ್ಣದೇವರಾಯ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ತೆರಳುವಾಗ ಮಾರ್ಗ ಮಧ್ಯೆ ತಂಗಿದ್ದು, ತನ್ನ ಆರಾಧ್ಯ ದೈವ ಶ್ರೀ ವೇಣುಗೋಪಾಲಸ್ವಾಮಿಯನ್ನು ಪ್ರತಿಷ್ಠಾಪಿಸಿದನೆಂಬ ಪ್ರತೀತಿಯಿದೆ. ಛತ್ರಪತಿ ಶಿವಾಜಿ ಕಾಲದಲ್ಲಿ ದೇವಾಲಯದ ಜೀರ್ಣೋದ್ಧಾರವಾಯಿತೆಂದು ಹೇಳಲಾಗುತ್ತದೆ. ಶಿಡ್ಲಘಟ್ಟ ಸ್ಥಾಪಿಸಿದ ಅಲಸೂರಮ್ಮ ಕೂಡ ಈ ದೇವಾಲಯವನ್ನು ಅಭಿವೃದ್ಧಿಗೊಳಿಸಿರುವುದಾಗಿ ಇತಿಹಾಸ ಹೇಳುತ್ತದೆ.
- Advertisement -
- Advertisement -
- Advertisement -
- Advertisement -