Home News ಶಿಡ್ಲಘಟ್ಟದ ರಸ್ತೆಗಳ ಅಭಿವೃದ್ಧಿಗಾಗಿ ಬೆಂಗಳೂರಿನ ವಾಹನ ಸಂಚಾರಿ ಯೋಜನಾ ಸಂಚಾಲಕ ಎಚ್.ಎಲ್.ಶಶಿಧರರವರ ನೀಲನಕ್ಷೆ

ಶಿಡ್ಲಘಟ್ಟದ ರಸ್ತೆಗಳ ಅಭಿವೃದ್ಧಿಗಾಗಿ ಬೆಂಗಳೂರಿನ ವಾಹನ ಸಂಚಾರಿ ಯೋಜನಾ ಸಂಚಾಲಕ ಎಚ್.ಎಲ್.ಶಶಿಧರರವರ ನೀಲನಕ್ಷೆ

0

ರಾಜಧಾನಿಯಂಥಹ ದೊಡ್ಡ ನಗರಗಳಲ್ಲಿ ಮತ್ತು ವಿದೇಶಗಳಲ್ಲಿ ರಸ್ತೆಯ ನಿರ್ಮಾಣ, ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿಯೇ ಪ್ರತ್ಯೇಕ ಇಲಾಖೆಗಳಿರುತ್ತವೆ. ಅದರಿಂದಾಗಿಯೇ ವಾಹನ ದಟ್ಟಣೆ, ಪಾದಚಾರಿಗಳು, ಮರಗಿಡಗಳು ಮತ್ತು ಅಂಗಡಿ ಮುಂಗಟ್ಟುಗಳು ಎಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡು ರಸ್ತೆಗಳ ನಿರ್ಮಾಣವಾಗುತ್ತವೆ. ಇಂಥಹ ಅನುಕೂಲ ಸಣ್ಣ ಊರುಗಳಿಗೆ ಲಭ್ಯವಿರುವುದಿಲ್ಲ. ಆದರೆ ಶಿಡ್ಲಘಟ್ಟ ಪಟ್ಟಣಕ್ಕೂ ವಿದೇಶಿ ಮಾದರಿಯ ಉನ್ನತ ದರ್ಜೆಯ ರಸ್ತೆ ಹಾಗೂ ಪರಿಸರವನ್ನು ನಿರ್ಮಾಣಮಾಡಬೇಕೆಂಬ ಕನಸನ್ನು ಕೆಲವರು ಕಂಡಿದ್ದರು.
ಪಟ್ಟಣದಲ್ಲಿ ಉತ್ತಮ ರಸ್ತೆ ನಿರ್ಮಾಣದ ಕನಸು ಕಂಡಿದ್ದ ವ್ಯಕ್ತಿಯೊಬ್ಬರ ಕನಸು ಹಾಗೇ ಉಳಿದಿದೆ. ಅವರ ಕನಸಿಗೆ ಮೂರು ವರ್ಷಗಳು ಸಂದಿವೆ. ಶಿಡ್ಲಘಟ್ಟ ಪುರಸಭೆ ಮೇಲ್ದರ್ಜೆಗೆ ಏರಿ ನಗರಸಭೆಯಾಗಲಿದೆ. ಈ ಕಾರಣಕ್ಕೆ ಹೊಸದಾಗಿ ಆಯ್ಕೆಯಾದ ಸದಸ್ಯರು ಹುರುಪಿನಲ್ಲಿದ್ದಾರೆ. ಪಟ್ಟಣವನ್ನು ಅಭಿವೃದ್ಧಿಗೊಳಿಸುವುದಾಗಿ ಶಾಸಕ ಎಂ.ರಾಜಣ್ಣ ಕೂಡ ಭರವಸೆ ನೀಡಿದ್ದಾರೆ. ಇಂಥ ಸನ್ನಿವೇಶದಲ್ಲಿ ಹಳೆ ಕನಸಿಗೆ ಮತ್ತೆ ಮರುಜೀವ ದೊರೆತೀತೆ ಎಂಬ ಆಶಾಭಾವ ಮೂಡಿದೆ.
ಶಿಡ್ಲಘಟ್ಟದಲ್ಲಿ ಓದಿ, ಬೆಳೆದು ಈಗ ಬೆಂಗಳೂರಿನ ವಾಹನ ಸಂಚಾರಿ ಯೋಜನಾ ಸಂಚಾಲಕರಾಗಿರುವ ಎಚ್.ಎಲ್.ಶಶಿಧರ್ ಪಟ್ಟಣದ ಎರಡು ಪ್ರಮುಖ ರಸ್ತೆಗಳ ಅಭಿವೃದ್ಧಿಯ ನೀಲನಕ್ಷೆಯನ್ನು ತಯಾರಿಸಿಕೊಟ್ಟಿದ್ದರು. ಶಿಸ್ತು ಬದ್ಧ ಸಂಚಾರ, ವಾಹನ ನಿಲುಗಡೆ ವ್ಯವಸ್ಥೆ, ಪಾದಚಾರಿಗಳ ಸುರಕ್ಷತೆ ಹಾಗೂ ರಸ್ತೆ ಬದಿಯಲ್ಲಿ ಮರಗಿಡ ಬೆಳೆಸುವುದು ಈ ನೀಲನಕ್ಷೆಯ ಪ್ರಮುಖ ಉದ್ದೇಶಗಳಾಗಿತ್ತು.
ರಸ್ತೆಯ ಅಗಲ 12.2 ಮೀಟರ್(40 ಅಡಿಗಳು) ಇರಬೇಕು. ಇದರಲ್ಲಿ ಎರಡೂ ಬದಿಯಲ್ಲಿ 2 ಮೀಟರ್ ಅಗಲ ವಾಹನ ನಿಲುಗಡೆಗೆ, 1.2 ಮೀಟರ್ ಪಾದಚಾರಿ ರಸ್ತೆಗೆ ಬಿಟ್ಟು ಉಳಿದ 5.8 ಮೀಟರ್ ಸ್ಥಳವನ್ನು ವಾಹನ ಸಂಚಾರಕ್ಕೆ ಬಳಸಬಹುದಾಗಿದೆ. ಅಲ್ಲಲ್ಲಿ ಪಾದಚಾರಿಗಳಿಗಾಗಿ ರಸ್ತೆಯನ್ನು ದಾಟಲು ಉಬ್ಬುಗಳು, ಮರ ಗಿಡ ಬೆಳೆಸಲೆಂದೇ ಸ್ಥಳಗಳು, ರಸ್ತೆ ತಿರುವುಗಳು ಎಲವನ್ನೂ ವೈಜ್ಞಾನಿಕವಾಗಿ ಮತ್ತು ಕಾರ್ಯರೂಪಕ್ಕೆ ತರಬಲ್ಲಂತೆ ರೂಪುರೇಷೆಯನ್ನು ತಯಾರಿಸಿದ್ದಾರೆ.

ಶಿಡ್ಲಘಟ್ಟದ ರಸ್ತೆಗಳ ಅಭಿವೃದ್ಧಿಯ ನೀಲನಕ್ಷೆಯನ್ನು ತಯಾರಿಸಿರುವ ಬೆಂಗಳೂರಿನ ವಾಹನ ಸಂಚಾರಿ ಯೋಜನಾ ಸಂಚಾಲಕರಾಗಿರುವ ಎಚ್.ಎಲ್.ಶಶಿಧರ್.
ಶಿಡ್ಲಘಟ್ಟದ ರಸ್ತೆಗಳ ಅಭಿವೃದ್ಧಿಯ ನೀಲನಕ್ಷೆಯನ್ನು ತಯಾರಿಸಿರುವ ಬೆಂಗಳೂರಿನ ವಾಹನ ಸಂಚಾರಿ ಯೋಜನಾ ಸಂಚಾಲಕರಾಗಿರುವ ಎಚ್.ಎಲ್.ಶಶಿಧರ್.

‘ನೂರು ವರ್ಷಗಳ ಹಿಂದೆ ಅಂದರೆ 1891ರಲ್ಲಿ ಶಿಡ್ಲಘಟ್ಟದ ಜನಸಂಖ್ಯೆಯಿದ್ದದ್ದು ಕೇವಲ 6,572. ಆದರೆ 2001 ರಲ್ಲಿ 41,105 ಕ್ಕೆ ಏರಿತ್ತು. ಈಗ ಹತ್ತು ವರ್ಷಗಳ ತರುವಾಯ ಇನ್ನಷ್ಟು ಏರಿದೆ. ಭವಿಷ್ಯದ ದೃಷ್ಟಿಯಿಂದ ಮಾದರಿ ನಗರವಾಗುವಂತೆ ಪಟ್ಟಣವನ್ನು ರೂಪಿಸುವ ಅಗತ್ಯವಿದೆ. ನಾನು ಓದಿ ಬೆಳೆದ ಊರಿಗೆ ಏನಾದರೂ ಸೇವೆ ಸಲ್ಲಿಸುವ ಉದೇಶದಿಂದ ಈ ನೀಲನಕ್ಷೆಯನ್ನು ತಯಾರಿಸಿದೆ. ಬೆಂಗಳೂರು ನಗರದಲ್ಲಿರುವ ವಿಟ್ಟಲ್ ಮಲ್ಯ ರಸ್ತೆಯಂತೆ ನಮ್ಮೂರಿನ ಎರಡು ಪ್ರಮುಖ ರಸ್ತೆಗಳಾದ ಅಶೋಕ ಮತ್ತು ಟಿ.ಬಿ.ರಸ್ತೆಗಳು ಮಾದರಿ ರಸ್ತೆಗಳಾಗಬೇಕೆಂಬುದು ನನ್ನಾಸೆ. ಶಿಸ್ತು ಬದ್ಧ ಸಂಚಾರದಿಂದ ಅಪಘಾತಗಳು ಇಲ್ಲವಾಗುತ್ತವೆ. ಗಿಡಮರಗಳಿರುವುದರಿಂದಾಗಿ ಕಣ್ಮನ ತಣಿಯುವುದರೊಂದಿಗೆ ಆರೋಗ್ಯವೂ ವೃದ್ಧಿಸುತ್ತದೆ. ಸಂಜೆ ವೇಳೆ ಮರಗಳ ಅಡಿಯಿರುವ ಕಟ್ಟೆಗಳ ಮೇಲೆ ಜನರು ಬಂದು ಕೂರುವುದರಿಂದ ವಾಣಿಜ್ಯ ವ್ಯವಹಾರಗಳೂ ಅಭಿವೃದ್ಧಿಯಾಗುತ್ತವೆ’ ಎಂದು ಎಚ್.ಎಲ್.ಶಶಿಧರ್ ವಿವರಿಸಿದರು.
‘ಮೊದಲು ಹೂ ವೃತ್ತದಿಂದ ವೇಣುಗೋಪಾಲಸ್ವಾಮಿ ರಸ್ತೆಯವರೆಗೆ ಸುಮಾರು ೨೨೦ ಅಡಿಗಳಷ್ಟು ದೂರದ ರಸ್ತೆಯನ್ನು ಈ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು. ಜನರಿಗೆ ಒಂದು ಮಾದರಿ ಸಿದ್ಧವಾದಾಗ ಅವರಲ್ಲೂ ವಿಶ್ವಾಸ ಮೂಡುತ್ತದೆ. ಮುಂದೆ ರಿಂಗ್ ರೋಡ್ ನಿರ್ಮಾಣ, ದೊಡ್ಡದಾದ ಸರಕು ಸಾಗಾಣಿಕೆ ವಾಹನಗಳ ಪಥ ಬದಲಾವಣೆ, ಮೂಲಭೂತ ಸೌಕರ್ಯಗಳಾದ ನೀರಿನ ನಿರ್ವಹಣೆ, ಮಳೆಕೊಯ್ಲು ಮುಂತಾದವುಗಳನ್ನು ಅಭಿವೃದ್ಧಿ ಪಡಿಸಿ ನಮ್ಮ ಊರನ್ನು ಮಾದರಿ ಪಟ್ಟಣವನ್ನಾಗಿಸುವ ಉದ್ದೇಶವಿದೆ. ಸಾರ್ವಜನಿಕರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಹಕರಿಸಬೇಕು. ಮೂರು ವರ್ಷಗಳ ಹಿಂದೆ ಆಗಿದ್ದ ಸರ್ಕಲ್‌ ಇನ್ಸ್‌ಪೆಕ್ಟರ್‌ ಸಹಕಾರ ನೀಡಿದ್ದರು. ಪುರಸಭೆಯ ಅಧಿಕಾರಿಗಳಿಗೆ ಈ ನೀಲನಕ್ಷೆಯನ್ನು ನೀಡಿದ್ದೆ. ಆದರೆ ಏನೂ ಪ್ರಯೋಜನವಾಗಲಿಲ್ಲ. ನಮ್ಮ ಕ್ಷೇತ್ರದ ಕೇಂದ್ರ ಸಚಿವರನ್ನೂ ಸಂಪರ್ಕಿಸಿ ವಿವರಿಸಿದ್ದೆ. ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಇದೇ ರಸ್ತೆಗಳ ಅಭಿವೃದ್ಧಿಯ ನೀಲನಕ್ಷೆಯನ್ನು ಕೇಂದ್ರ ಸಚಿವ ಕಮಲ್‌ನಾಥ್‌ ಅವರಿಗೂ ತೋರಿಸಿದೆ. ತಕ್ಷಣವೇ ಅವರು ಮಧ್ಯಪ್ರದೇಶದ ಚಿಂದವಾಡದಲ್ಲಿ ರೂಪಿಸಲು ನನ್ನನ್ನು ಕಳುಹಿಸಿದರು. ನಮ್ಮ ಊರಿನಲ್ಲಿ ಆಗಬೇಕಾದ ಅಭಿವೃದ್ಧಿ ಮಧ್ಯಪ್ರದೇಶದಲ್ಲಾಯಿತು. ನಮ್ಮ ಊರಿನ ಅಭಿವೃದ್ಧಿಗಾಗಿ ಈಗಲೂ ಆಶಾವಾದಿಯಾಗಿದ್ದೇನೆ’ ಎಂದು ಅವರು ಹೇಳಿದರು.