ಶಿಡ್ಲಘಟ್ಟಕ್ಕೆ ಸೈಬೀರಿಯಾ, ಹಿಮಾಲಯಾ ಮತ್ತು ಯೂರೋಪ್ ದೇಶಗಳಿಂದ ಅತಿಥಿಗಳ ಆಗಮನವಾಗಿದೆ. ಅತಿಥಿಗಳು ಬಂದಿರುವುದು ಶಿಡ್ಲಘಟ್ಟದ ಹೊರವಲಯದಲ್ಲಿರುವ ಅಮ್ಮನ ಕೆರೆಗೆ. ಅತಿಥಿಗಳಾಗಿ ಬಂದಿರುವುದು ಪುಟ್ಟ ಆಕಾರದ ಹಕ್ಕಿಗಳು.
‘ಲಿಟಲ್ ರಿಂಗ್ಡ್ ಪ್ಲೋವರ್’ ಎಂಬ ಪುಟ್ಟ ಹಕ್ಕಿಯು ಚಳಿಗಾಲದ ಅತಿಥಿಗಳಾಗಿ ಅಮ್ಮನಕೆರೆಯಲ್ಲಿ ಬೀಡು ಬಿಟ್ಟಿದ್ದು, ಕೆಲವು ಜೋಡಿಗಳಲ್ಲಿ ಕಂಡು ಬಂದರೆ, ಮಿಕ್ಕವು ಒಂಟಿಯಾಗಿ ಆಹಾರಕ್ಕೆ ಜಾಲಾಡುತ್ತಿರುತ್ತಿವೆ.
ಕಳೆದ ಬಾರಿ ಮಳೆಯಿಲ್ಲದೆ ಕೆರೆ ಪೂರಾ ಒಣಗಿತ್ತು. ಆದರೆ ಈ ಬಾರಿ ಮಳೆ ಕಡಿಮೆಯಾಗಿ ಅಮ್ಮನಕೆರೆಯಲ್ಲಿ ನೀರು ತುಂಬ ಕಡಿಮೆಯಾಗಿದೆ. ಅಲ್ಲಲ್ಲಿ ನೀರಿನ ಹೊಂಡದಂತೆ ಕಂಡು ಬರುವ ಜಲಸೆಲೆಗಳಲ್ಲಿಯೇ ಈ ವಲಸೆ ಹಕ್ಕಿಗಳು ಆಹಾರಕ್ಕಾಗಿ ಹುಡುಕಾಟ ನಡೆಸಿವೆ.
ಆಕಾರದಲ್ಲಿ ಪುಟ್ಟ ಕೋಳಿ ಮರಿಗಳಂತೆ ಕಂಡುಬಂದರೂ ಇವುಗಳ ಸಾಮರ್ಥ್ಯ ಕಡಿಮೆಯೇನಿಲ್ಲ. ಐದಾರು ಸಾವಿರ ಕಿ.ಮೀ ದೂರವನ್ನು ಕ್ರಮಿಸಿ ಭಾರತಕ್ಕೆ ಇವು ಆಗಮಿಸಿವೆ. ಬುಡಬುಡನೆ ಪುಟ್ಟ ಕಾಲುಗಳಲ್ಲಿ ಓಡುತ್ತಾ ನಿಲ್ಲುತ್ತಾ ಆಹಾರ ಅನ್ವೇಶಣೆ ನಡೆಸುತ್ತಾ, ಅಪಾಯವೆನಿಸಿದರೆ ಸಿಳ್ಳೆ ಹೊಡೆದಂತೆ ಸದ್ದು ಮಾಡುತ್ತಾ ಹಾರಿ ಮತ್ತೊಂದು ನೀರಿನ ಸೆಲೆಯ ಬಳಿ ಹೋಗಿ ಕೂರುತ್ತವೆ.
‘ಲಿಟಲ್ ರಿಂಗ್ಡ್ ಪ್ಲೋವರ್’ ಹಕ್ಕಿಯನ್ನು ಕನ್ನಡದಲ್ಲಿ ಸಣ್ಣ ಕರಿಪಟ್ಟಿ ಗೊರವ ಎನ್ನುತ್ತಾರೆ. ಪುಟ್ಟ ಕೌಜು ಹಕ್ಕಿಯ ಗಾತ್ರವಿದ್ದು, ಬಾಲ, ರೆಕ್ಕೆ, ಬೆನ್ನು, ತಲೆಯ ಭಾಗವೆಲ್ಲಾ ಕಂದುಬಣ್ಣ, ಹಳದಿ ಕಾಲುಗಳು, ಪುಟ್ಟ ಕಪ್ಪು ಕೊಕ್ಕನ್ನು ಈ ಹಕ್ಕಿ ಹೊಂದಿದೆ. ಕುತ್ತಿಗೆಗೆ ಕಪ್ಪು ಬಣ್ಣದ ಪಟ್ಟಿಯನ್ನು ಕಟ್ಟಿಕೊಂಡಂತೆ ಕಾಣುವ ಗುರುತಿದೆ. ಗಡ್ಡಭಾಗ ಹಾಗೂ ಹೊಟ್ಟೆ ಅಚ್ಚ ಬಿಳುಪಿನಿಂದ ಕೂಡಿದೆ.
ಈ ಹಕ್ಕಿಗಳೊಂದಿಗೆ ಓಪನ್ ಬಿಲ್ಡ್ ಸ್ಟಾರ್ಕ್, ಬೆಳ್ಳಕ್ಕಿಗಳು, ಗ್ರೇಟರ್ ಸ್ಯಾಂಡ್ ಪ್ಲೋವರ್, ಲ್ಯಾಪ್ವಿಂಗ್ ಹಕ್ಕಿಗಳು ಕೂಡ ಕೆರೆಯ ಜೌಗಿನಲ್ಲಿ ಕಂಡು ಬಂದಿದ್ದು, ಆಹಾರದ ಅನ್ವೇಷಣೆಯಲ್ಲಿ ತೊಡಗಿವೆ.
‘ಈ ಲಿಟಲ್ ರಿಂಗ್ಡ್ ಪ್ಲೋವರ್ ಹಕ್ಕಿಗಳು ಸಂತಾನಾಭಿವೃದ್ಧಿಯನ್ನು ಮಾರ್ಚ್ನಿಂದ ಮೇ ತಿಂಗಳಿನಲ್ಲಿ ಮಾಡುತ್ತವೆ. ಅವುಗಳು ವಾಸಿಸುವ ಹಿಮಾಲಯ ಮತ್ತು ಯೂರೋಪ್ ದೇಶಗಳಲ್ಲಿ ಚಳಿ ಹೆಚ್ಚಾದಾಗ ಭಾರತ, ಪಾಕಿಸ್ತಾನ, ಶ್ರೀಲಂಕಾ ದೇಶಗಳಿಗೆ ಬರುತ್ತವೆ. ವಾರದ ರಜಾದಿನಗಳಲ್ಲಿ ನಮ್ಮ ಹಂಡಿಗನಾಳ ಗ್ರಾಮಕ್ಕೆ ಬಂದಾಗ ಹತ್ತಿರದ ಅಮ್ಮನಕೆರೆಗೆ ಈ ಚಳಿಗಾಲದಲ್ಲಿ ಹೋಗಿ ಹಕ್ಕಿಗಳನ್ನು ವೀಕ್ಷಿಸುವುದು ರೂಢಿ. ನಮ್ಮಲ್ಲಿನ ಕೆರೆಗಳಿಗೂ ಅಷ್ಟು ದೂರದ ಹಕ್ಕಿಗಳು ಆಗಮಿಸುತ್ತವೆ ಎಂಬುದು ಸಂತಸದ ಸಂಗತಿ. ಕೆರೆಗಳಿಗೆ ಕಸ ಮುಂತಾದ ತ್ಯಾಜ್ಯ ಹಾಕದೇ, ಕಳೆ ಗಿಡಗಳನ್ನು ಬೆಳೆಯಲು ಬಿಡದೆ ಸ್ವಚ್ಛವಾಗಿಟ್ಟುಕೊಂಡಲ್ಲಿ ಇನ್ನಷ್ಟು ಹಕ್ಕಿಗಳನ್ನು ನಾವು ನೋಡಬಹುದು’ ಎಂದು ಡಾ.ಶಶಿಧರ್ ತಿಳಿಸಿದರು.