ಶಿಕ್ಷಣದಿಂದ ಮಾತ್ರ ಸಮಾಜದ ಉದ್ದಾರ ಸಾಧ್ಯ. ಯಾವುದೇ ಸಮುದಾಯ ಸಮಾಜದಲ್ಲಿ ಏಳಿಗೆ ಕಾಣಬೇಕಾದರೆ ಸರ್ಕಾರದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳುವುದರ ಜೊತೆಗೆ ಶೈಕ್ಷಣಿಕವಾಗಿ ಮುಂದುವರೆದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ದಾವಣಗೆರೆ ರಾಜನಹಳ್ಳಿ ಗುರುಪೀಠದ ಪ್ರಸನ್ನಾನಂದ ಸ್ವಾಮಿಜೀ ಹೇಳಿದರು.
ನಗರದ ಚಿಂತಾಮಣಿ ರಸ್ತೆಯಲ್ಲಿರುವ ವಾಲ್ಮೀಕಿ ದೇವಾಲಯದ ಹಿಂಭಾಗದಲ್ಲಿ ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಇತಿಹಾಸದ ಪುಟಗಳಲ್ಲಿ ಸಾಧಕರಾಗಿರುವವರೆಲ್ಲರೂ ತಮ್ಮ ಜೀವನದಲ್ಲಿ ಅನುಭವಿಸಿದ ನೈಜ ಘಟನೆಗಳಿಂದ ಪ್ರಭಾವಿತರಾಗಿರುವವರೇ ಆಗಿದ್ದಾರೆ. ಇಂತಹ ಸಾಧಕರ ಜೀವನದ ಕುರಿತು ಅಧ್ಯಯನ ನಡೆಸಬೇಕಾದಂತಹ ಅನಿವಾರ್ಯತೆ ಇದೆ. ಸ್ವಾತಂತ್ರ್ಯ ಪೂರ್ವದಿಂದಲೂ ಶೋಷಣೆಗೆ ಒಳಗಾಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯಗಳನ್ನು ಇಂದಿಗೂ ಪಟ್ಟಭದ್ರಹಿತಾಸಕ್ತಿಗಳು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಳ್ಳಲು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಹಿಂದುಳಿಯುವಂತೆ ಮಾಡುತ್ತಿವೆ. ಆದ್ದರಿಂದ ಈ ಸಮುದಾಯಗಳನ್ನು ಎಲ್ಲಾ ರಂಗಗಳಲ್ಲೂ ಅಭಿವೃದ್ಧಿಯತ್ತ ಕೊಂಡೊಯ್ಯುವ ಸಲುವಾಗಿ ಸರ್ಕಾರ ಬಿಡುಗಡೆ ಮಾಡುತ್ತಿರುವ ಅನುದಾನಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಗುಣಮಟ್ಟದ ಶಿಕ್ಷಣ ಪಡೆಯಬೇಕು. ವಾಲ್ಮೀಕಿ ಜಯಂತಿ, ಅಂಬೇಡ್ಕರ್ ಜಯಂತಿಯಂತಹ ಆಚರಣೆಗಳು ಕೇವಲ ಮೆರವಣಿಗೆಗಳಿಗೆ ಸೀಮಿತವಾಗಬಾರದು. ವಿಚಾರಗಳ ವಿನಿಮಯವಾಗಬೇಕು. ಸೌಲಭ್ಯಗಳ ಬಗ್ಗೆ ಜನರಿಗೆ ಮಾಹಿತಿ ಸಿಗಬೇಕು ಎಂದರು.
ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡದ ಸಮುದಾಯಗಳ ಅಭಿವೃದ್ಧಿ ಸೇರಿದಂತೆ ಎಲ್ಲಾ ಸಮುದಾಯಗಳ ಹಿಂದುಳಿದ ಜನರನ್ನು ಸಮಾಜದಲ್ಲಿ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸರ್ಕಾರ ಕೈಗೊಳ್ಳುತ್ತಿರುವ ಜನಪರ ಕಾರ್ಯಕ್ರಮಗಳು ಸದ್ಭಳಕೆಯಾಗಬೇಕು. ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ತಾಲ್ಲೂಕಿನಲ್ಲಿ ನಿರ್ಮಾಣ ಮಾಡುತ್ತಿರುವ ಮೊರಾರ್ಜಿದೇಸಾಯಿ ವಸತಿ ಶಾಲೆಗಳು, ವಾಲ್ಮೀಕಿ ಭವನಗಳ ಮೂಲಕ ಆರ್ಥಿಕವಾಗಿ ದುರ್ಬಲರಾಗಿರುವ ಜನಾಂಗಗಳ ಕಲ್ಯಾಣವಾಗಬೇಕು. ಯಾವುದೇ ಸೌಲಭ್ಯಗಳಿಂದ ಬದುಕು ಸುಧಾರಣೆಯಾಗದಿದ್ದರೂ ಶಿಕ್ಷಣದಿಂದ ಮಾತ್ರ ಸುಧಾರಣೆಯಾಗಬಲ್ಲದು ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟವರ್ಗದ ಜನಾಂಗಗಳಿಗೆ ಮೀಸಲಾತಿಯ ಪ್ರಮಾಣ ಹೆಚ್ಚಾಗಬೇಕು. ಮಾದಿಗ ಸಮುದಾಯದವರು, ನ್ಯಾಯಮೂರ್ತಿ ಸದಾಶಿವ ಆಯೋಗದ ಅನುಷ್ಟಾನಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಸಮುದಾಯದ ಸಂಪೂರ್ಣ ಸಹಕಾರವಿದೆ ಎಂದು ದಾವಣಗೆರೆ ರಾಜನಹಳ್ಳಿ ಗುರುಪೀಠದ ಪ್ರಸನ್ನಾನಂದ ಸ್ವಾಮಿಜೀ ಹೇಳಿದರು.
ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಜನಪರವಾದ ಕಾರ್ಯಕ್ರಮಗಳಿಗೆ ಜನರು ಕೊಟ್ಟಿರುವ ತೀರ್ಪಾಗಿದೆ ಎಂದು ಕೆ.ಎಚ್ ಮುನಿಯಪ್ಪ ತಿಳಿಸಿದರು. ಕೆ.ಪಿ.ಸಿ.ಸಿ. ಅಧ್ಯಕ್ಷಸ್ಥಾನಕ್ಕೆ ನಾನೂ ಕೂಡಾ ಆಕಾಂಕ್ಷಿಯಾಗಿದ್ದೇನೆ. ಎಲ್ಲಾ ಸಮುದಾಯಗಳನ್ನು ಒಗ್ಗಟ್ಟಿನಿಂದ ಸಂಘಟನೆ ಮಾಡಿ ಪಕ್ಷವನ್ನು ಸಂಘಟಿಸುವ ಸಾಮರ್ಥ್ಯವಿದ್ದು ಹೈಕಮಾಂಡ್ ಜವಾಬ್ದಾರಿ ನೀಡಿದರೆ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆಯಡಿಯಲ್ಲಿ ಕೋಟ್ಯಾಂತರ ರೂಪಾಯಿಗಳ ಅನುದಾನಗಳನ್ನು ತಂದು ಅಭಿವೃದ್ಧಿ ಪಡಿಸಲಾಗಿದೆ. ಸರ್ಕಾರದಿಂದ ಮಂಜೂರಾಗಿರುವ ಯೋಜನೆಗಳಿಗೆ ತ್ವರಿತಗತಿಯಲ್ಲಿ ಹಣ ಬಿಡುಗಡೆಯಾಗುತ್ತಿಲ್ಲ ಆದ್ದರಿಂದ ಕಾಮಗಾರಿಗಳು ಕುಂಠಿತವಾಗುತ್ತಿವೆ ಎಂದರು.
ಕಾರ್ಯಕ್ರಮದ ಅಂಗವಾಗಿ ನಗರದ ಬಸ್ನಿಲ್ದಾಣದಿಂದ ಸಾಂಸ್ಕೃತಿಕ ಕಲಾತಂಡಗಳ ಮೂಲಕ ಮೆರವಣಿಗೆ ನಡೆಸಲಾಯಿತು. ಮುತೈದೆಯರು ಕಲಶಗಳನ್ನು ಹೊತ್ತುಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಉಪಾಧ್ಯಕ್ಷೆ ನಿರ್ಮಲಮುನಿರಾಜು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಂಕ್ಮುನಿಯಪ್ಪ, ಸತೀಶ್, ತನುಜಾರಘು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ನಾಯಕ ಸಮುದಾಯದ ಮುಖಂಡರುಗಳು, ಅಧಿಕಾರಿಗಳು ಹಾಜರಿದ್ದರು.
- Advertisement -
- Advertisement -
- Advertisement -
- Advertisement -