Home News ಶಾಸಕರ ಸ್ವಗ್ರಾಮದಲ್ಲಿ ಹನ್ನೊಂದು ರಾಸುಗಳ ಮರಣ

ಶಾಸಕರ ಸ್ವಗ್ರಾಮದಲ್ಲಿ ಹನ್ನೊಂದು ರಾಸುಗಳ ಮರಣ

0

ಕ್ಷೇತ್ರದ ಶಾಸಕ ಎಂ.ರಾಜಣ್ಣ ಅವರ ಸ್ವಗ್ರಾಮ ಎಲ್.ಮುತ್ತುಗದಹಳ್ಳಿಯಲ್ಲಿ ಕಳೆದ ಇಪ್ಪತ್ತು ದಿನಗಳಲ್ಲಿ ಸುಮಾರು ಹನ್ನೊಂದು ಹಸುಗಳು ಮೃತಪಟ್ಟಿದ್ದು, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.
ಪಶುವೈದ್ಯಾಧಿಕಾರಿಗಳು ಬಂದು ಹೋಗಿದ್ದಾರೆ ಆದರೆ ಇದುವರೆಗೂ ಜಾನುವಾರುಗಳಗೆ ಯಾವ ರೋಗ ಬಂದಿದೆ, ಏಕೆ ಸಾಮೂಹಿಕವಾಗಿ ಮರಣವನ್ನಪ್ಪುತ್ತಿದೆ ಎಂಬುದನ್ನು ಧೃಡಪಡಿಸುತ್ತಿಲ್ಲ. ಹಸುಗಳನ್ನೇ ನಂಬಿ ಬದುಕುತ್ತಿದ್ದೇವೆ. ಹಲವರು ಮೃತಪಟ್ಟ ಜಾನುವಾರುಗಳನ್ನು ಹೂಳಲೂ ಆಗದೇ ಕೆರೆಯ ಪಕ್ಕ ಬಿಸಾಡಿದ್ದಾರೆ. ಖಾಯಿಲೆ ವಾಸಿಯಾಗುವುದಿಲ್ಲವೆಂದು ಕೆಲವರು ಕಸಾಯಖಾನೆಗೆ ಮಾರಿದ್ದಾರೆ. ಯಾರೋ ಒಬ್ಬಿಬ್ಬರು ಮಾತ್ರ ಸ್ವಂತ ಖರ್ಚಿನಿಂದ ಜೆಸಿಬಿ ತರಿಸಿ ಹೂಳು ತಗಿಸಿ ಸತ್ತ ಹಸುಗಳನ್ನು ಮಣ್ಣು ಮಾಡಿದ್ದಾರೆ. ಸತ್ತ ಹಸುವಿನ ನೋವು, ಆರ್ಥಿಕ ಹೊರೆಯನ್ನು ಹೊತ್ತಿರುವ ರೈತನಿಗೆ ಸೂಕ್ತ ಮಾರ್ಗದರ್ಶನ ಮಾಡುವವರು ಇಲ್ಲವಾಗಿದ್ದಾರೆ. ಹಾಲು ಒಕ್ಕೂಟದವರಾಗಲೀ, ಹಾಲು ಉತ್ಪಾದಕರ ಸಹಕಾರ ಸಂಘದವರಾಗಲೀ ರೋಗ ಹರದಂತೆ ತಡೆಯಲು ಕನಿಷ್ಠ ಹಸುವನ್ನು ಹೂಳಲಾದರೂ ಸಹಾಯ ಮಾಡಬೇಕು. ಕೆಲವಕ್ಕೆ ವಿಮೆ ಮಾಡಿಸಿದ್ದರೆ, ಕೆಲವಕ್ಕೆ ಮಾಡಿಸಿಲ್ಲ. ಹೈನುಗಾರಿಕೆಯನ್ನು ನಂಬಿದವರು ನೆಲಕಚ್ಚಿದ್ದಾರೆ. ಸರ್ಕಾರ ಸಹಾಯ ಮಾಡಬೇಕು ಎನ್ನುತ್ತಾರೆ ಗ್ರಾಮಸ್ಥರು.
ಎಲ್.ಮುತ್ತುಗದಹಳ್ಳಿ ಗ್ರಾಮದ ಮುನಿವೆಂಕಟಸ್ವಾಮಿ, ಸೊಣ್ಣಪ್ಪ, ಅಕ್ಕಲಪ್ಪ, ಎಂ.ನಾರಾಯಣಸ್ವಾಮಿ, ವೆಂಕಟೇಶಪ್ಪ, ರಾಮಣ್ಣ, ಸುಬ್ರಮಣಿ ಅವರ ಒಂದೊಂದು ಹಸುಗಳು ಹಾಗೂ ಕೃಷ್ಣಪ್ಪ ಮತ್ತು ಸುಬ್ಬರಾಯಪ್ಪ ಅವರ ಎರಡು ಹಸುಗಳು ಸೇರಿದಂತೆ ಒಟ್ಟು 11 ಹಸುಗಳು ಮೃತಪಟ್ಟಿವೆ.
‘ಮೇವು ತಿನ್ನುತ್ತಾ ನೀರು ಕುಡಿಯುತ್ತಿದ್ದ ಹಸು ಇದ್ದಕ್ಕಿದ್ದಂತೆಯೇ ಸಪ್ಪಗಾಯಿತು. ತಿನ್ನುವುದನ್ನು ನಿಲ್ಲಿಸಿಬಿಟ್ಟಿತು. ತಕ್ಷಣ ಹೋಗಿ ಪಶುವೈದ್ಯಾಧಿಕಾರಿ ಡಾ.ಮುನಿನಾರಾಯಣರೆಡ್ಡಿ ಅವರನ್ನು ಕರೆದುಕೊಂಡು ಬಂದೆವು. ಅವರು ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ನೋಡನೋಡುತ್ತಿದ್ದಂತೆಯೇ ಹಸು ಮೃತಪಟ್ಟಿತು. ವೈದ್ಯಾಧಿಕಾರಿ ಅದರ ಕಿವಿಯನ್ನು ಕತ್ತರಿಸಿ ರೋಗದ ಕಾರಣ ಕಂಡು ಹಿಡಿಯಲು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟರು. ಇನ್ನೊಂದು ಹಸುವೂ ಅದೇ ರೀತಿ ಆಯಿತು. ಅದಕ್ಕೂ ವೈದ್ಯರು ಚಿಕಿತ್ಸೆ ನೀಡಿದರೂ ಬದುಕುಳಿಯಲಿಲ್ಲ. ಯಾವ ರೋಗ, ಏನಾಗುತ್ತಿದೆ ಎಂದು ತಿಳಿಯದಂತೆ ಕೆಲ ಗಂಟೆಗಳಲ್ಲಿ ನಮ್ಮ ಎರಡು ಹಸುಗಳನ್ನು ಕಳೆದುಕೊಂಡೆವು. ವೈದ್ಯರು ಆಂಥ್ರಾಕ್ಸ್ ರೋಗವಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ’ ಎಂದು ಎಚ್.ಕೃಷ್ಣಪ್ಪ ತಿಳಿಸಿದರು.
‘ಬರಪೀಡಿತ ಜಿಲ್ಲೆಯೆಂದು ಘೋಷಿಸಬೇಕು. ಜಾನುವಾರುಗಳಿಗೆ ಮೇವಿಲ್ಲ. ಕುಡಿಯಲು ನೀರಿಲ್ಲ ಎಂದು ಈಗಾಗಲೇ ರೈತಸಂಘದಿಂದ ಮನವಿಗಳನ್ನು ಸರ್ಕಾರಕ್ಕೆ ನೀಡಿದ್ದೇವೆ. ಇಂಥಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿರುವಾಗ ಕಷ್ಟಪಟ್ಟು ಜಾನುವಾರುಗಳನ್ನು ಸಾಕುವ ರೈತನಿಗೆ ಕೊಡಲಿಪೆಟ್ಟಿನಂತೆ ಹಸುಗಳಿಗೆ ಖಾಯಿಲೆ ಬಂದು ಮೃತಪಡುತ್ತಿವೆ. ಇಷ್ಟೊಂದು ರಾಸುಗಳು ಸತ್ತಿದ್ದರೂ ಖಾಯಿಲೆ ಯಾವುದು ಎಂಬುದನ್ನು ಅಧಿಕಾರಿಗಳು ಧೃಡಪಡಿಸದಿರುವುದು ದುರದೃಷ್ಟಕರ. ಸತ್ತ ರಾಸುಗಳ ಮಾಲೀಕರಿಗೆ ಸರ್ಕಾರ ಕನಿಷ್ಠ 50 ಸಾವಿರ ರೂಗಳಾದರೂ ಪರಿಹಾರ ನೀಡಿ ಅವರನ್ನು ಉಳಿಸಬೇಕು’ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿದ್ದಾರೆ.
ರೈತಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಅಬ್ಲೂಡು ಆರ್.ದೇವರಾಜ್, ಗ್ರಾಮದ ಮಂಜುನಾಥರೆಡ್ಡಿ, ಶಶಿಧರ್, ಮುನಿನಾರಾಯಣಪ್ಪ, ಸುಶೀಲಮ್ಮ, ಕೆಂಪಮ್ಮ, ಪ್ರಕಾಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.