ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕಾಂಪೋಂಡ್, ನೀರಿನ ಸಮಸ್ಯೆ ಬಗೆಹರಿಸದಿರುವುದಕ್ಕೆ ಎಸ್.ಎಫ್.ಐ ಮತ್ತು ಡಿ.ವೈ.ಎಫ್.ಐ ನೇತೃತ್ವದಲ್ಲಿ ಕಾಲೇಜು ಬಹಿಷ್ಕರಿಸಿದ ವಿದ್ಯಾರ್ಥಿಗಳು ಶಾಸಕ ಎಂ.ರಾಜಣ್ಣ ಅವರ ಮನೆಗೆ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟಿಸಿದರು.
ಕಳೆದ ನಾಲ್ಕು ತಿಂಗಳ ಹಿಂದೆ ವಿದ್ಯಾರ್ಥಿಗಳೆಲ್ಲಾ ಸೇರಿ ಕಾಲೇಜಿನಲ್ಲಿ ಮೂಲಭೂತ ಸೌಕರ್ಯ ನೀಡುವಂತೆ ಪ್ರತಿಭಟಿಸಿದ್ದೆವು. ಕಾಲೇಜಿನಲ್ಲಿ ಸೂಕ್ತ ಬಂದೋಬಸ್ತ್ ಇಲ್ಲದ ಕಾರಣ ಅಪರಿಚಿತರು ಕಾಲೇಜಿನೊಳಕ್ಕೆ ಬರುತ್ತಿರುತ್ತಾರೆ. ಗೋಡೆಗಳ ಮೇಲೆ ಅಶ್ಲೀಲ ಬರಹಗಳನ್ನು ಬರೆದು ಹೋಗುತ್ತಾರೆ. ಸಂಜೆ ವೇಳೆ ಕಾಲೇಜು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಖಾಲಿಯಾದ ಮದ್ಯದ ಬಾಟಲುಗಳನ್ನು ಕೊಠಡಿಯೊಳಗೆ ಬಿಸಾಡಿರುತ್ತಾರೆ. ಶೌಚಾಲಯದಲ್ಲಿ ಸಿಂಕ್, ಬೇಸನ್ ಮುಂತಾದವುಗಳನ್ನು ಮುರಿದು ಹೋಗಿರುತ್ತಾರೆ. ಈ ಬಗ್ಗೆ ಶಾಸಕರಿಗೆ ಹಲವು ಬಾರಿ ಮನವಿ ಪತ್ರ ಸಲ್ಲಿಸಿದ್ದೆವು. ನಾಲ್ಕು ತಿಂಗಳ ಹಿಂದೆ ಶಾಸಕರು ಕಾಲೇಜಿಗೆ ಭೇಟಿ ನೀಡಿ ಒಂದು ತಿಂಗಳ ಒಳಗೆ ಕಾಂಪೋಂಡ್ ನಿರ್ಮಾಣ ಮತ್ತು ಪೊಲೀಸರಿಂದ ಸೂಕ್ತ ಬಂದೋಬಸ್ತ್ ಒದಗಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಸಮಸ್ಯೆ ಬಗೆಹರಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಡಿ.ವೈ.ಎಫ್.ಐ ರಾಜ್ಯ ಮುಖಂಡ ಕುಂದಲಗುರ್ಕಿ ಮುನೀಂದ್ರ, ‘ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೂಲಭೂತ ಸೌಲಭ್ಯಗಳು ಕಲ್ಪಿಸಬೇಕೆಂದು ಹಲವು ಬಾರಿ ಪ್ರತಿಭಟನೆ ಮಾಡಿ ಶಾಸಕರ ಗಮನಕ್ಕೆ ತಂದಿದ್ದರೂ ಸಹ ಇದುವರೆಗೂ ಸಮಸ್ಯೆ ಬಗೆಹರಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ. ಗ್ರಾಮಾಂತರ ಪ್ರದೇಶಗಳಿಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸಾವಿರಾರು ಮಂದಿ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ಆದರೆ ವಿದ್ಯಾರ್ಥಿನಿಯರಿಗೆ ಶೌಚಾಲಯ, ನೀರಿನ ಸಮಸ್ಯೆ ಮತ್ತು ಸೂಕ್ತ ಭದ್ರತೆಯಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ದಿನದಿಂದ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರಿಗೆ ರಕ್ಷಣೆಯಿಲ್ಲದ ಪರಿಸ್ಥಿತಿಯಿದೆ’ ಎಂದು ತಿಳಿಸಿದರು.
ಅನುಮತಿ ಪಡೆಯದೆ ಪ್ರತಿಭಟಿಸಬಾರದು ಎಂದ ಪೊಲೀಸರೊಂದಿಗೆ ಶಾಸಕರ ಮನೆಯ ಮುಂದೆ ಪ್ರತಿಭಟನಾ ನಿರತರು ವಾಗ್ವಾದ ನಡೆಸಿದ ಘಟನೆಯೂ ನಡೆಯಿತು. ಶಾಸಕರ ಅನುಪಸ್ಥಿತಿಯಲ್ಲಿ ಶಾಸಕರ ಪತ್ನಿ ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ ಅವರು ಮನವಿ ಸ್ವೀಕರಿಸಿ ಮಾತನಾಡಿ,‘ಒಂದು ವಾರದೊಳಗೆ ಕಾಂಪೋಂಡ್ ನಿರ್ಮಾಣ ಮಾಡಲು ಶಾಸಕರು ಬದ್ಧರಾಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ’ ಎಂದು ಹೇಳಿದರು.
ಸಮಸ್ಯೆ ಬಗೆಹರಿಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ರೀತಿಯಾಗಿ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಪ್ರತಿಭಟನಾ ನಿರತರು ಎಚ್ಚರಿಕೆ ನೀಡಿದರು.
ಡಿ.ವೈ.ಎಫ್.ಐ ತಾಲ್ಲೂಕು ಅಧ್ಯಕ್ಷ ಸದಾನಂದ, ಫೈಯಾಜುಲ್ಲಾ, ನಾಗರಾಜ, ವೆಂಕಟೇಶ, ನರಸಿಂಹಮೂರ್ತಿ, ಕಾವ್ಯಶ್ರೀ, ಲಲಿತಾ, ಪವಿತ್ರಾ, ಭಾಗ್ಯ, ಮಂಜು, ಸಾವಿತ್ರಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.