ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ಭಾನುವಾರ ನಗರದ ಬಿಜಿಎಸ್ ಪಬ್ಲಿಕ್ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಶೇ 70 ರಷ್ಟು ಮತದಾನ ನಡೆದಿದೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಮೂರು ನಿರ್ದೇಶಕ ಸ್ಥಾನಗಳು ಮೀಸಲಾಗಿದ್ದು, ಕಣದಲ್ಲಿ ಒಟ್ಟು 12 ಮಂದಿ ಇದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ 11,130 ಮತದಾರರು ಇದ್ದಾರೆ. ಅದಕ್ಕಾಗಿ ಬಿಜಿಎಸ್ ವಿದ್ಯಾಸಂಸ್ಥೆಯಲ್ಲಿ 22 ಬೂತ್ ಗಳನ್ನು ಮಾಡಿದ್ದು, ಒಂದೊಂದರಲ್ಲೂ 500 ಮಂದಿ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಒಟ್ಟು 7,890 ಮಂದಿ ಮತದಾನ ಮಾಡಿದರು.
ಜಿಲ್ಲೆಯ ಯಲುವಳ್ಳಿ ರಮೇಶ್, ಟಿ. ಕೋನಪ್ಪ ರೆಡ್ಡಿ, ಎಂ. ಪ್ರಕಾಶ್ ಕಣದಲ್ಲಿ ಇದ್ದಾರೆ. ಈ ಮೂವರನ್ನು ಹೊರತುಪಡಿಸಿ ಉಳಿದ 9 ಮಂದಿ ಕೋಲಾರ ಜಿಲ್ಲೆಯವರಾಗಿದ್ದಾರೆ. ಯಲುವಳ್ಳಿ ರಮೇಶ್ ಮೂರು ಬಾರಿ ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಆಯ್ಕೆ ಆಗಿದ್ದವರು. ಸಂಘದ ಖಜಾಂಚಿ ಆಗಿಯೂ ಕೆಲಸ ಮಾಡಿದ್ದಾರೆ. ಈಗ ಅವರು ನಾಲ್ಕನೇ ಬಾರಿ ಗೆಲುವಿಗಾಗಿ ಹೋರಾಟ ನಡೆಸಿದ್ದಾರೆ.
ಕೋಲಾರದ ವೈದ್ಯ ಡಾ.ಡಿ.ಕೆ. ರಮೇಶ್ ಹಾಗೂ ಚಿಂತಾಮಣಿಯ ನಿವೃತ್ತ ಡಿವೈಎಸ್‌ಪಿ ಟಿ. ಕೋನಪ್ಪ ರೆಡ್ಡಿ, ಚಿಕ್ಕಬಳ್ಳಾಪುರ ಎಂ. ಪ್ರಕಾಶ್ ತಮ್ಮದೇ ತಂಡ (ಸಿಂಡಿಕೇಟ್) ರಚಿಸಿಕೊಂಡಿದ್ದರು. ಉಳಿದಂತೆ ಟಿ.ಎಸ್.ಅಂಜಿನಪ್ಪ, ಈಶ್ವರರೆಡ್ಡಿ, ಪರಮೇಶ್, ರಘುನಾಥರೆಡ್ಡಿ, ಬಿ.ಆರ್.ಲಕ್ಷ್ಮಣ, ಸೊಣಪ್ಪ, ವಿ.ರಮೇಶ್ ಬಾಬು, ಕೆ.ಎಸ್.ವೇಣುಗೋಪಾಲ್ ಸ್ಪರ್ಧೆಯಲ್ಲಿ ಇದ್ದಾರೆ. ಇವರೆಲ್ಲರೂ ಕೋಲಾರ ಜಿಲ್ಲೆಯವರು.
ಕಣದಲ್ಲಿ 12 ಮಂದಿ ಇದ್ದು, ಮೂವರಿಗೆ ಪ್ರಾಶಸ್ತ್ಯ ಮತವನ್ನು ನೀಡುವ ಅವಕಾಶ ಮತದಾರರಿಗೆ ನೀಡಲಾಗಿತ್ತು. ಶಿಡ್ಲಘಟ್ಟದಲ್ಲಿ ಚುನಾವಣಾಧಿಕಾರಿಯಾಗಿ ಬಾಲಕೃಷ್ಣ ಕಾರ್ಯನಿರ್ವಹಿಸಿದರು.