ಯಾವುದೇ ಖಾಯಿಲೆಯಿಲ್ಲ, ಇದುವರೆಗೂ ಆಸ್ಪತ್ರೆ ಮುಖ ನೋಡಿಲ್ಲ, ತಿನ್ನುವ ಆಹಾರ ಕೇವಲ ರಾಗಿಮುದ್ದೆ ಸಾರು ಅಷ್ಟೆ. ಶತಕವನ್ನು ಪೂರೈಸಿರುವ ಈ ಅಜ್ಜಿಯನ್ನು ಕಂಡರೆ ಜೀವನೋತ್ಸಾಹ ಚಿಮ್ಮುತ್ತದೆ.
ತಾಲ್ಲೂಕಿನ ಸಾದಲಿ ಗ್ರಾಮದ ಆಚೆಪಲ್ಲಿ ಲಕ್ಷ್ಮಮ್ಮ ಆಗಸ್ಟ್ 7 ರಂದು ನೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸುಮಾರು 142 ಮಂದಿ ಕುಟುಂಬದ ಸದಸ್ಯರು ಸಾದಲಮ್ಮ ಸಮುದಾಯ ಭವನದಲ್ಲಿ ಆಕೆಯ ನೂರು ವರ್ಷದ ಸಂಭ್ರಮಾಚರಣೆಯನ್ನು ನಡೆಸಿದರು.
ಆಚೆಪಲ್ಲಿ ಲಕ್ಷ್ಮಮ್ಮ ಅವರ ತವರೂರು ಚಿಕ್ಕಬಳ್ಳಾಪುರ ಬಳಿಯ ಕೇತೇನಹಳ್ಳಿ. ಆಕೆ ವಿವಾಹವಾಗಿದ್ದು ಆಚೆಪಲ್ಲಿ ಪಾಪಣ್ಣ ಎಂಬುರನ್ನು. ಬಾಗೇಪಲ್ಲಿ ತಾಲ್ಲೂಕಿನ ಆಚೆಪಲ್ಲಿಯ ಮೂಲದ ಪಾಪಣ್ಣ ಸಾಂಕ್ರಾಮಿಕ ರೋಗದ ಭಯದಿಂದ ಗ್ರಾಮವನ್ನು ತೊರೆದು ಚಿಕ್ಕಂದಿನಲ್ಲೇ ಸಾದಲಿಗೆ ಬಂದು ನೆಲೆಸಿದ್ದರಂತೆ. ವ್ಯವಸಾಯ ಇವರ ಕಸುಬು. ಇಬ್ಬರಿಗೂ 9 ಮಂದಿ ಮಕ್ಕಳು. ಅವರಲ್ಲಿ 6 ಗಂಡು 3 ಹೆಣ್ಣುಮಕ್ಕಳು. ಮೊಮ್ಮಕ್ಕಳೆಲ್ಲ ಸೇರಿದರೆ 142 ಮಂದಿ ಇದ್ದಾರೆ.
ಅವಿಭಕ್ತ ಕುಟುಂಬವಾಗಿದ್ದ ಇವರು ನಾಲ್ವರು ಗಂಡು ಮಕ್ಕಳು ನಿಧನರಾದ ಮೇಲೆ 2000ರಲ್ಲಿ ವಿಭಕ್ತ ಕುಟುಂಬಗಳಾಗಿ ಬೇರೆ ಬೇರೆಡೆ ನೆಲೆಸಿದರು. 2009 ರಲ್ಲಿ ಪಾಪಣ್ಣ ಸತ್ತಾಗ ಆತನಿಗೂ ನೂರು ವರ್ಷಗಳಾಗಿತ್ತಂತೆ.
‘ಶತಾಯುಷಿಗಳು ಈಗ ಅಪರೂಪ. ನಮಗೆಲ್ಲಾ ನಮ್ಮಮ್ಮ ಶತಾಯುಷಿಯಾಗಿದ್ದು ಸಂತಸ ತಂದಿದೆ. ನನ್ನ ತಾಯಿಗೆ ಬೆನ್ನು ಬಾಗಿದೆ. ಆದರೆ ಆರೋಗ್ಯವಾಗಿದ್ದಾಳೆ. ಸದಾ ಚಟುವಟಿಕೆಯಿಂದಿರುತ್ತಾಳೆ. ಹಲ್ಲುಗಳಿಲ್ಲದ ಕಾರಣ ಮುದ್ದೆ ಸೊಪ್ಪಿನ ಸಾರು ಆಕೆಯ ಇಷ್ಟದ ಆಹಾರ. ಕೆಲವೊಮ್ಮೆ ಎಲೆ ಅಡಿಕೆ ಸುಣ್ಣವನ್ನು ಕುಟ್ಟಾಣಿಯಲ್ಲಿ ಕುಟ್ಟಿಕೊಂಡು ಮೆಲುಮುತ್ತಾಳೆ. ಆಕೆಯ ಜೀವನಪ್ರೀತಿ ಮಾದರಿಯಾಗಿದೆ’ ಎನ್ನುತ್ತಾರೆ ಲಕ್ಷ್ಮಮ್ಮ ಅವರ ಮಗ ಮುನಿರಾಜು.