ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಪುರದ ಸ್ವಚ್ಛದ ಕಾರ್ಯ ಕೈಗೊಳ್ಳುತ್ತಾರೆ. ಅವರನ್ನು ಗೌರವದಿಂದ ಕಾಣಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ಪಟ್ಟಣದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ರಾಜ್ಯ ಪೌರ ನೌಕರರ ಸೇವಾ ಸಂಘದ ಶಿಡ್ಲಘಟ್ಟ ಶಾಖೆಯ ವತಿಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೌರಕಾರ್ಮಿಕರ ಸಮಸ್ಯೆಗಳೂ ಸಾಕಷ್ಟಿದ್ದು ಅದರ ಬಗ್ಗೆ ಚರ್ಚೆ ಹಾಗೂ ಸಮಸ್ಯೆ ನಿವಾರಣೆಗಾಗಿ ಪರಿಹಾರ ಕಂಡುಕೊಳ್ಳುವುದು ಕೂಡ ನಡೆಯಬೇಕಿದೆ. ಪ್ರತಿಯೊಬ್ಬರೂ ತಮ್ಮ ವೃತ್ತಿಯನ್ನು ಗೌರವ ಹಾಗೂ ಪ್ರೀತಿಯಿಂದ ಕಾಣುವುದಲ್ಲದೆ ಇತರ ವೃತ್ತಿಯನ್ನೂ ಗೌರವಿಸಬೇಕು. ಪೌರಕಾರ್ಮಿಕರೂ ಕೂಡ ತಮ್ಮ ಜವಾಬ್ದಾರಿಯುತ ಕೆಲಸವನ್ನು ಪ್ರೀತಿಯಿಂದ ಮಾಡಬೇಕು. ಜನಪ್ರತಿನಿಧಿಗಳು ನಿಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತೇವೆ ಎಂದು ಹೇಳಿದರು.
ರಾಜ್ಯ ಪೌರ ನೌಕರರ ಸೇವಾ ಸಂಘದ ಜಿಲ್ಲಾಧ್ಯಕ್ಷ ಮುರಳಿ ಮಾತನಾಡಿ, ‘ಹತ್ತು ವರ್ಷಕ್ಕೂ ಮೇಲ್ಪಟ್ಟು ಸೇವೆ ಸಲ್ಲಿಸಿರುವ ಪೌರಕಾರ್ಮಿಕರನ್ನು ಖಾಯಂ ಗೊಳಿಸುವಂತೆ ಸರ್ಕಾರ ಆದೇಶಿಸಿದೆ. ಪೌರಕಾರ್ಮಿಕರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದು ಕೆಲವೊಂದು ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ಸಿಕ್ಕಿದೆ. ನಮ್ಮ ಕಷ್ಟ ಹಾಗೂ ತೊಂದರೆಗಳನ್ನು ನಿವಾರಿಸುವಲ್ಲಿ ಸಂಘವು ಶ್ರಮಿಸುತ್ತಿದೆ’ ಎಂದು ನುಡಿದರು.
ಈ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಪೌರಕಾರ್ಮಿಕರಾದ ಮುನಿಯಪ್ಪ, ಷಮೀವುಲ್ಲಾ, ಕೋದಂಡ, ಶ್ರೀರಾಂ, ರಾಮು, ಮಾರಕ್ಕ, ಲೋಕೇಶ್, ವೆಂಕಟಮ್ಮ, ಜಯಲಕ್ಷ್ಮಮ್ಮ ಅವರನ್ನು ಸನ್ಮಾನಿಸಲಾಯಿತು.
ಪುರಸಭಾ ಅಧ್ಯಕ್ಷೆ ಮುಷ್ಠರಿ ತನ್ವೀರ್, ರಾಜ್ಯ ಪೌರ ನೌಕರರ ಸೇವಾ ಸಂಘದ ತಾಲ್ಲೂಕು ಅಧ್ಯಕ್ಷ ಶಂಕರಪ್ಪ, ನಾರಾಯಣಸ್ವಾಮಿ, ಡಾ.ಸತ್ಯನಾರಾಯಣರಾವ್, ಮುಖ್ಯಾಧಿಕಾರಿ ರಾಮ್ಪ್ರಕಾಶ್, ಪುರಸಭಾ ಸದಸ್ಯರಾದ ಚಿಕ್ಕಮುನಿಯಪ್ಪ, ವೆಂಕಟಸ್ವಾಮಿ, ಬಾಲಕೃಷ್ಣ, ಲಕ್ಷ್ಮಣ, ನಂದಕಿಶನ್, ರಮೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -