ಗುಣಾತ್ಮಕವಾದ ಶಿಕ್ಷಣವನ್ನು ನೀಡುವ ಮೂಲಕ ಖಾಸಗಿ ಶಾಲೆಗಳಿಗಿಂತ ಉತ್ತಮವಾದ ವಿದ್ಯಾರ್ಥಿಗಳನ್ನು ತಯಾರು ಮಾಡುವ ಶಕ್ತಿ ಸಾಮರ್ಥ್ಯಗಳು ಸರ್ಕಾರಿ ಶಾಲೆಗಳ ಶಿಕ್ಷಕರಲ್ಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಹೇಳಿದರು.
ತಾಲ್ಲೂಕಿನ ವೀರಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಎಸ್.ಡಿ.ಎಂ.ಸಿ. ಸಮಿತಿಯ ಬಹುದಿನದ ಬೇಡಿಕೆಯ ಮೇರೆಗೆ ೭ ನೇ ತರಗತಿಯನ್ನು ಪ್ರಾರಂಭಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚಾಗಿರುವ ಈ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉಳಿಸಿಕೊಳ್ಳುವುದು, ಸಾಹಸದ ಕೆಲಸವಾಗಿದೆ. ಪೋಷಕರು ಆಂಗ್ಲ ಮಾಧ್ಯಮದ ಮೇಲೆ ಹೆಚ್ಚು ವ್ಯಾಮೋಹವುಳ್ಳವರಾಗಿ ಸರ್ಕಾರಿ ಶಾಲೆಗಳ ಕಡೆಗೆ ಗಮನ ನೀಡುವುದಿಲ್ಲ, ಸರ್ಕಾರದಿಂದ ಬಹಳಷ್ಟು ಉತ್ತೇಜನ ನೀಡಿ, ಉಚಿತ ಸಮವಸ್ತ್ರ, ಪಠ್ಯಪುಸ್ತಕಗಳು, ಹಾಲಿನ ವಿತರಣೆ, ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಹಲವು ಸೌಲಭ್ಯಗಳನ್ನು ಸರ್ಕಾರಿ ಶಾಲೆಗಳಲ್ಲಿ ಕಲ್ಪಿಸಲಾಗಿದೆ. ಒಂದನೇ ತರಗತಿಯಿಂದಲೇ ಮಕ್ಕಳಿಗೆ ಆಂಗ್ಲ ಭಾಷೆಯನ್ನು ಕಲಿಸಲಾಗುತ್ತಿದ್ದು, ಪೋಷಕರು ಹೆಚ್ಚು ಉತ್ಸಾಹ ತೋರಿಸಿ, ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಿಸಬೇಕು. ಶಿಕ್ಷಕರೂ ಕೂಡಾ ಹೆಚ್ಚು ಬದ್ದತೆಯಿಂದ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂದರು.
ಎಸ್.ಡಿ.ಎಂ.ಸಿ.ಅಧ್ಯಕ್ಷ ಮುನಿರಾಜು ಮಾತನಾಡಿ, ಖಾಸಗಿ ಶಾಲೆಗಳಲ್ಲಿ ಹಣವನ್ನು ಗಳಿಸುವ ಉದ್ದೇಶದಿಂದ ದುಬಾರಿ ಹಣವನ್ನು ಪಡೆದುಕೊಂಡರೂ ಕೂಡಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ವಿಫಲವಾಗುತ್ತಿವೆ, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವಂತಹ ಮಕ್ಕಳಿಗೆ ಹೋಲಿಕೆ ಮಾಡಿದರೆ, ಖಾಸಗಿ ಶಾಲೆಗಳ ಮಕ್ಕಳಲ್ಲಿ ಕಲಿಕೆಯ ಮಟ್ಟ ಕಡಿಮೆಯಾಗಿದ್ದು, ಪೋಷಕರು ಅರ್ಥ ಮಾಡಿಕೊಳ್ಳಬೇಕು, ಸರ್ಕಾರಿ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ ಸರ್ಕಾರದ ಸೌಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಶಾಲೆಯಲ್ಲಿ ಏಳನೇ ತರಗತಿ ಪ್ರಾರಂಭವಾದ ನೆನಪಿಗಾಗಿ ಶಾಲಾವರಣದಲ್ಲಿ ಗಿಡವನ್ನು ನೆಟ್ಟು ನೀರು ಹಾಕಲಾಯಿತು. ಶಾಲೆಯ ಹಿರಿಯ ವಿಧ್ಯಾರ್ಥಿ ಕೆ.ವೆಂಕಟೇಶ್ ಅವರು ೭ ನೇ ತರಗತಿಯಲ್ಲಿ ವ್ಯಾಸಂಗ ಮಾಡುವಂತಹ ಎಲ್ಲಾ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಮುಂದಿನ ಆಗಸ್ಟ್ ೧೫ ರೊಳಗೆ ಕಂಪ್ಯೂಟರ್ಗಳನ್ನು ನೀಡುವುದಾಗಿ ಭರವಸೆ ನೀಡಿದರು.
ಬಿ.ಆರ್.ಸಿ.ಕೇಂದ್ರದ ಸಮನ್ವಯಾಧಿಕಾರಿ ಕೆ.ಸುಮಾ, ಸಿ.ಆರ್.ಪಿ.ಗಳಾದ ಲಕ್ಷ್ಮೀನರಸಂಹಗೌಡ, ಚೌಡರೆಡ್ಡಿ, ವಿಜಯಪುರ ಪ್ರಗತಿ ಶಾಲೆಯ ಪ್ರಾಂಶುಪಾಲ ವೆಂಕಟೇಶ್, ಗ್ರಾಮದ ಮುನಿನಂಜಪ್ಪ, ರಾಮಣ್ಣ, ಮುನಿಯಪ್ಪ, ಕೃಷ್ಣಪ್ಪ, ನಾಗರಾಜ, ಸುಭ್ರಮಣಿ, ಲಕ್ಷ್ಮೀಪತಿ, ಮುನಿಯಪ್ಪ, ಮುಖ್ಯಶಿಕ್ಷಕಿ ಜಯಶ್ರೀ, ಸಹಶಿಕ್ಷಕರಾದ ಸರಸ್ವತಿ, ನಿರ್ಮಲ, ಸುಮಾ, ಅಂಗನವಾಡಿ ಶಿಕ್ಷಕಿ ಶೋಭಾ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -