ಶಾಲೆಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವ ಶಿಕ್ಷಣ ಇಲಾಖೆಯ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸೋಮವಾರ ಮೆರವಣಿಗೆಯ ಮೂಲಕ ಜನರಲ್ಲಿ ಅರಿವು ಮೂಡಿಸಿದರು.
‘ಮಕ್ಕಳನ್ನು ಶಾಲೆಗೆ ಕಳುಹಿಸಿ’, ‘ಬಾಲ ಕಾರ್ಮಿಕ ಪದ್ಧತಿಗೆ ಧಿಕ್ಕಾರ’, ‘ಮಕ್ಕಳು ಶಿಕ್ಷಣ ವಂಚಿತರಾಗಬಾರದು’ ಎಂಬ ಘೋಷಣೆಗಳನ್ನು ಕೂಗುತ್ತಾ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.
‘ಆರರಿಂದ ಹದಿನಾಲ್ಕು ವರ್ಷದ ಮಕ್ಕಳು ಶಾಲೆಯಲ್ಲಿರಬೇಕು. ಯಾವುದೇ ರೀತಿಯ ದುಡಿಮೆ ಹಾಗೂ ಜೀತಕ್ಕೆ ಅವರನ್ನು ಕಳುಹಿಸಬಾರದು. ಅದು ಕಾನೂನು ರೀತಿಯಲ್ಲಿ ಅಪರಾಧ ಕೂಡ. ಆಡುವ ವಯಸ್ಸಿನಲ್ಲಿ ಆಡಬೇಕು. ಓದುವ ವಯಸ್ಸಿನಲ್ಲಿ ಓದಬೇಕು. ಆಡುತ್ತಾ ಕಲಿಯಬೇಕಿರುವ ಮಕ್ಕಳನ್ನು ಕೆಲಸಕ್ಕೆ ಹಾಕುವುದು ಅಮಾನುಷವಾದದ್ದು. ಸಾರ್ವಜನಿಕರು ಈ ರೀತಿಯಲ್ಲಿ ದುಡಿಯುತ್ತಿರುವ ಮಕ್ಕಳನ್ನು ಕಂಡಾಗ ಅವರ ಪೋಷಕರ ಮನವೊಲಿಸಿ ಶಾಲೆಗೆ ಕಳುಹಿಸಬೇಕು. ಈಗಾಗಲೇ ಮನೆಮನೆಗೆ ಹೋಗಿ ಎಂಟು ಮಕ್ಕಳನ್ನು ಶಾಲೆಗೆ ಕರೆತಂದಿದ್ದೇವೆ. ಸಮುದಾಯದ ಸಹಕಾರವಿದ್ದರೆ ಮಾತ್ರ ಈ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ’ ಎಂದು ಶಿಕ್ಷಕ ಸರ್ದಾರ್ ತಿಳಿಸಿದರು.
ಬೂದಾಳ ಗೇಟ್‌ನ ಗರುಡಾದ್ರಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಬ್ಯಾಂಡ್‌ಸೆಟ್‌ನೊಂದಿಗೆ ವಿಶೇಷ ದಾಖಲಾತಿ ಆಂದೋಲನ ಜಾಥಾ ನಡೆಸಿದರು.