ತೀವ್ರ ಬರಗಾಲಕ್ಕೆ ತುತ್ತಾಗಿರುವ ಬಯಲು ಸೀಮೆ ಭಾಗದ ಜನತೆ ಉಳಿಯಬೇಕಾದರೆ, ನೀರಾವರಿ ತಜ್ಞ ಪರಮಶಿವಯ್ಯನವರ ವರದಿಯಂತೆ ಶಾಶ್ವತ ನೀರಾವರಿ ಯೋಜನೆಯನ್ನು ಸರ್ಕಾರ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಬಯಲುಸೀಮೆಯ ಭಾಗಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ತುಮಕೂರು ಭಾಗಗಳಲ್ಲಿನ ಜನರು ನೀರಿಗಾಗಿ ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ನಡೆಸುತ್ತಿರುವ ಹೋರಾಟಗಳಿಗೆ ಆಡಳಿತ ನಡೆಸಿದಂತಹ ಯಾವುದೇ ಸರ್ಕಾರಗಳು, ಕವಡೆಕಾಸಿನ ಕಿಮ್ಮತ್ತನ್ನೂ ನೀಡಿಲ್ಲ. ಚುನಾವಣೆಗಳ ಸಮಯದಲ್ಲಿ ರಾಜಕೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ನೀರಿನ ವಿಷಯವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಎತ್ತಿನಹೊಳೆ ಯೋಜನೆಯ ಹೆಸರಿನಲ್ಲಿ ಸರ್ಕಾರ ಘೋಷಣೆ ಮಾಡಿರುವ ೧೩ ಸಾವಿರ ಕೋಟಿ ರೂಪಾಯಿಗಳ ಹಣವು ದುರುಪಯೋಗವಾಗುತ್ತದೆ. ನೂತನ ತಂತ್ರಜ್ಞಾನಗಳ ಬಗ್ಗೆ ಅರಿವಿಲ್ಲದಂತಹ ತಜ್ಞರನ್ನು ಇಟ್ಟುಕೊಂಡು ಸರ್ಕಾರ ಚೆಲ್ಲಾಟವಾಡುತ್ತಿದೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ ಒಂದು ವರ್ಷಕ್ಕೆ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದರೆ, ೧೩ ಸಾವಿರ ಕೋಟಿಗಳನ್ನು ಖರ್ಚು ಮಾಡಲು ೧೩ ವರ್ಷಗಳು ಬೇಕು. ಅಷ್ಟರಲ್ಲಿ ಇನ್ನೆರಡು ಬಾರಿ ಚುನಾವಣೆಗಳಲ್ಲಿ ಈ ಭಾಗದಲ್ಲಿನ ಜನರ ಕಣ್ಣಿಗೆ ಮಣ್ಣೆರಚುವಂತಹ ತಂತ್ರಗಾರಿಕೆಯನ್ನು ಮಾಡಲು ಹುನ್ನಾರ ನಡೆಸಿದೆ. ನಾವು ಕೇಳುತ್ತಿರುವುದು ನದಿಯಲ್ಲಿನ ಹರಿಯುವ ನೀರಲ್ಲ. ಮಳೆಗಾಲದಲ್ಲಿ ವ್ಯರ್ಥವಾಗಿ ಸಮುದ್ರಕ್ಕೆ ಹರಿಯುವ ನೀರನ್ನು ನಮಗೆ ಕುಡಿಯಲು ಕೊಡಿ ಎಂದರೆ, ಜನಪ್ರತಿನಿಧಿಗಳು ಜನರನ್ನು, ಹೋರಾಟಗಾರರನ್ನು ದಿಕ್ಕುತಪ್ಪಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದು ರೈತ ಸಂಘದ ಮುಖಂಡರೂ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆರೋಪಿಸಿದರು.
ಸುಮಾರು ಮೂರು ಗಂಟೆಗಳ ಕಾಲ ತಾಲ್ಲೂಕು ಕಚೇರಿಯ ಮುಂದೆ ಧರಣಿಯನ್ನು ನಡೆಸಿ ಕಚೇರಿಗೆ ದಿಗ್ಭಂಧನವನ್ನು ನಡೆಸಿ ನಂತರ ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಗೌರವಾಧ್ಯಕ್ಷ ಮೇಲೂರು ನಾಗರಾಜ್, ಮುನಿಕೆಂಪಣ್ಣ, ಕಾರ್ಯದರ್ಶಿ ಪ್ರತೀಶ್, ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮಳ್ಳೂರು ಶಿವಣ್ಣ, ಡಿ.ವೈ.ಎಫ್.ಐ.ಸಂಘಟನೆಯ ಲಕ್ಷ್ಮೀದೇವಮ್ಮ, ಮುನೀಂದ್ರ, ಒಕ್ಕಲಿಗರ ಯುವ ಸೇನೆ ತಾಲ್ಲೂಕು ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ಶಶಿಕುಮಾರ್, ಯೂನಿಟಿ ಸಿಲ್ಸಿಲಾ ಪದಾಧಿಕಾರಿಗಳು ಮುಂತಾದವರು ಹಾಜರಿದ್ದರು.