ಶಿಡ್ಲಘಟ್ಟದ ಹೊರವಲಯದ ಇದ್ಲೂಡಿನಲ್ಲಿ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟ ದೊಡ್ಡದಾದ ಬಾವಲಿಯೊಂದು ಸಂತೆಪ್ಪನವರ ಮೂರ್ತಿ ಅವರಿಗೆ ಸಿಕ್ಕಿದ್ದು, ತಾಯಿಯನ್ನು ಅಪ್ಪಿಕೊಂಡು ಬದುಕುಳಿದಿದ್ದ ಅದರ ಮರಿಯನ್ನು ಅವರು ರಕ್ಷಿಸಿದ್ದಾರೆ.
ಇನ್ನೂ ಕಣ್ಣು ಬಿಡದ ಪುಟ್ಟ ಕಂದಮ್ಮವದು. ತಾಯಿಯ ಮೊಲೆಯನ್ನು ಹೀರುತ್ತಿದೆ. ಆದರೆ ಅದರ ತಾಯಿ ಮೃತಪಟ್ಟಿರುವುದು ಮಾತ್ರ ಅದರ ಅರಿವಿಗೆ ಬಂದಿಲ್ಲ. ಬಾವಲಿ ತಾಯಿ ಹಾಗೂ ಮರಿಯ ಈ ಕರುಣಾಜನಕ ದೃಶ್ಯಕ್ಕೆ ಸಾಕ್ಷಿಯಾದವರು ಶಿಡ್ಲಘಟ್ಟದ ಹೊರವಲಯದ ಇದ್ಲೂಡಿನ ಸಂತೆಪ್ಪನವರ ಮೂರ್ತಿ.
ಬೆಳಿಗ್ಗೆಯೇ ತಮ್ಮ ತೋಟದ ಕೆಲಸವನ್ನು ಮುಗಿಸಿಕೊಂಡು ಬರುವಾಗ ವಿದ್ಯುತ್ ತಂತಿಯಿಂದ ಧಡ್ ಎಂಬ ಸದ್ದಿನೊಂದಿಗೆ ಬಿದ್ದದ್ದನ್ನು ನೋಡಿದಾಗ ಅವರ ಕಣ್ಣಿಗೆ ಬಿದ್ದ ದೃಶ್ಯ ಮನಕಲುಕುವಂತಿತ್ತು. ದೊಡ್ಡದಾದ ಬಾವಲಿಯು ವಿದ್ಯುತ್ ಆಘಾತಕ್ಕೆ ಒಳಗಾಗಿ ಕೆಳಗೆ ಬಿದ್ದು ಮೃತಪಟ್ಟಿತ್ತು. ಅದರ ಪುಟ್ಟ ಮರಿ ಮಾತ್ರ ತನ್ನ ತಾಯಿಯು ಸತ್ತಿದ್ದು ಕೂಡ ತಿಳಿಯದಂತೆ ಅದನ್ನು ಅಪ್ಪಿಕೊಂಡಿತ್ತು.
’ಸಾಮಾನ್ಯವಾಗಿ ಬಾವಲಿಗಳು ವಿದ್ಯುತ್ ತಂತಿಗೆ ಸಿಲುಕುವುದಿಲ್ಲ. ಮರಿಯನ್ನು ಹೊತ್ತು ಸಾಗುವಾಗ ಸುಸ್ತಾಗಿ ಬಹುಶಃ ವಿದ್ಯುತ್ ತಂತಿಯ ಆಸರೆ ಪಡೆಯಲು ಹೋಗಿ ಅವಘಡಕ್ಕೆ ತುತ್ತಾಗಿರಬೇಕು. ಮರಿಯು ಬದುಕಿರುವುದು ಕೂಡ ಪವಾಡವೇ. ನಿಶಾಚರಿಯಾದ ಇಂಥಹ ಬಾವಲಿಯನ್ನು ಹಾರುವ ನರಿ(ಫ್ಲೈಯಿಂಗ್ ಫಾಕ್ಸ್) ಎನ್ನುತ್ತಾರೆ’ ಎಂದು ಮರಿಯನ್ನು ರಕ್ಷಿಸಿದ ಸಂತೆಪ್ಪನವರ ಮೂರ್ತಿ ತಿಳಿಸಿದರು.