ಎಸ್.ಎಫ್.ಐ ಮತ್ತು ಡಿ.ವೈ.ಎಫ್.ಐ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಉಪನಿರ್ದೇಶಕರ ಪ್ರತಿಕೃತಿಗಳ ಶವಯಾತ್ರೆಯನ್ನು ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಮುಖ ರಸ್ತೆಗಳಲ್ಲಿ ಶವಯಾತ್ರೆಯನ್ನು ನಡೆಸಿ ವಿದ್ಯಾರ್ಥಿ ವಿರೋಧಿ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೋಟೆ ವೃತ್ತದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಕೃತಿಗಳನ್ನು ಸುಟ್ಟು ಪ್ರತಿಭಟಿಸಿದರು.
ತಾಲ್ಲೂಕಿನ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಮಿತಿ ಮೀರಿದ ಶುಲ್ಕ ವಸೂಲಿ ಮಾಡಿ ಬಡವರ ರಕ್ತ ಹೀರುತ್ತಿರುವ ಸಂಗತಿಯನ್ನು ಈಗಾಗಲೇ ಮೇ ತಿಂಗಳಿನಿಂದ ಇಲ್ಲಿಯವರೆಗೂ ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಜಿತ್‌ಪ್ರಸಾದ್ ಅವರಿಗೆ ಮನವಿಯನ್ನು ಕೊಟ್ಟಿದ್ದರೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಶಿಕ್ಷಣ ಶುಲ್ಕ ನೀತಿಯನ್ನು ಸರಿಪಡಿಸಲಾಗದ ಅಧಿಕಾರಿಗಳ ವೈಫಲ್ಯವನ್ನು ಖಂಡಿಸಿ ಅಧಿಕಾರಿಗಳ ವಿರುದ್ಧ ವಿನೂತನವಾಗಿ ಶವಯಾತ್ರೆ ನಡೆಸುವ ಮೂಲಕ ಪ್ರತಿಭಟಿಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಡಿ.ವೈ.ಎಫ್.ಐ ರಾಜ್ಯ ಸಮಿತಿ ಸದಸ್ಯ ಕುಂದಲಗುರ್ಕಿ ಮುನೀಂದ್ರ, ತಾಲ್ಲೂಕು ಅಧ್ಯಕ್ಷ ಸದಾನಂದ, ಕಾರ್ಯದರ್ಶಿ ವಾಸು, ಬಾಬು, ಮಂಜುನಾಥ, ಶಶಿ, ಪ್ರದೀಪ್, ಎಸ್.ಎಫ್.ಐ ಮುಖಂಡರಾದ ಮುಜಾಯಿದ್ ಪಾಷ, ಗುರುಮೂರ್ತಿ, ಆರೀಫ್‌ಪಾಷ, ರಾಜು, ಮಂಜುಶ್ರೀ, ನಂದಿನಿ, ಲತಾ, ಅರ್ಚನಾ, ಸೌಜನ್ಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.