ಮೈಸೂರಿನಿಂದ ಡಾ.ಎಸ್.ರಾಧಾಕೃಷ್ಣನ್ ಅವರು ವರ್ಗಾವಣೆಯಾದಾಗ ರಥದಲ್ಲಿ ಕುಳ್ಳರಿಸಿ ವಿದ್ಯಾರ್ಥಿಗಳೇ ಎಳೆಯುತ್ತಾ ಬೀಳ್ಕೊಟ್ಟರು ಎಂದು ವಿದ್ಯಾರ್ಥಿನಿ ಸಿ.ಅಶ್ವಿನಿ ತಿಳಿಸಿದರು.
ತಾಲ್ಲೂಕಿನ ದ್ಯಾವಪ್ಪನಗುಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ವಿದ್ಯಾರ್ಥಿಗಳೇ ಆಚರಿಸಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ತಮಗೆ ಮಾರ್ಗದರ್ಶನ ನೀಡಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಕಾರಣರಾದ ಗುರುಗಳನ್ನು ನೆನೆಯುವ ಮೂಲಕ ಅವರನ್ನು ಗೌರವಿಸಬೇಕು. ಜ್ಞಾನ ಹಾಗೂ ನೈತಿಕ ಮೌಲ್ಯಗಳನ್ನು ಹಂಚುತ್ತಾ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಶಿಕ್ಷಕರು ಪೂಜನೀಯರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಕೆ.ವಿ.ವಂದನಾ ನಿರೂಪಣೆ ಮಾಡಿದರೆ, ಕೆ.ಎ.ಅನೂಷ ಸ್ವಾಗತ ಕೋರಿದರು. ಶಿರೀಷ ವಂದನೆಗಳನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದರು. ಮ್ಯೂಸಿಕಲ್ ಚೇರ್, ಬಕೆಟ್ಗೆ ಚೆಂಡು ಎಸೆಯುವ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಗೊಂಬೆಗೆ ಕುಂಕುಮ ಇಡುವ ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತ ಶಿಕ್ಷಕರಿಗೆ ಬಹುಮಾನಗಳನ್ನು ಹಾಗೂ ಶಿಕ್ಷಕರಿಗೆಲ್ಲಾ ಸಿಹಿಯನ್ನು ವಿದ್ಯಾರ್ಥಿಗಳು ವಿತರಿಸಿದರು.
ಪ್ರಭಾರಿ ಮುಖ್ಯಶಿಕ್ಷಕ ಎಂ.ಪಿ.ಜೀವಂಧರ್ಕುಮಾರ್, ಶಿಕ್ಷಕರಾದ ಮಾಲತೇಶ ಹಳ್ಳೇರ, ಸುಮಲತಾ ಮತ್ತಿತರರು ಹಾಜರಿದ್ದರು.