ತಾಲ್ಲೂಕಿನಲ್ಲಿ ಹಲವಾರು ರೈತರು ಸಾವಯವ ಕೃಷಿಯತ್ತ ಆಕರ್ಷಿತರಾಗಿದ್ದಾರೆ. ಕೆಲವರು ರಾಸಾಯನಿಕವನ್ನು ಕ್ರಮೇಣ ನಿಧಾನ ಮಾಡುತ್ತಾ ಸಾವಯವ ಪದ್ಧತಿಯತ್ತ ಸಾಗುತ್ತಿದ್ದಾರೆ. ಆದರೆ ಸಹಜಕೃಷಿ ಹರಿಕಾರನೆಂದೇ ಪ್ರಸಿದ್ಧಿ ಪಡೆದ ಜಪಾನಿನ ಮಸನೊಬು ಫುಕುವೊಕ ತೋರಿಸಿಕೊಟ್ಟ ಸಹಜ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿರುವವರು ವಿರಳ. ಆದರೆ ತಾಲ್ಲೂಕಿನ ಬೋದಗೂರಿನ ವೆಂಕಟಸ್ವಾಮಿರೆಡ್ಡಿ ಸದ್ದಿಲ್ಲದೇ ಹನ್ನೆರಡು ವರ್ಷಗಳಿಂದ ತಮ್ಮ ಐದು ಎಕರೆ ಜಮೀನಿನಲ್ಲಿ ಸಹಜ ಕೃಷಿಯನ್ನು ಮಾಡುತ್ತಿದ್ದಾರೆ.
ಸಾಗುವಳಿ ಮಾಡದೇ ಕೃಷಿ ಕಾಯಕ ಕೈಗೊಳ್ಳುವುದು. ರಸಗೊಬ್ಬರಗಳ ಬಳಕೆ ಮಾಡದಿರುವುದು. ಕಳೆ ತೆಗೆಯದಿರುವುದು ಹಾಗೂ ಕೀಟನಾಶಕ ಸಿಂಪಡಿಸದೇ ಇರುವುದು ಸಹಜ ಕೃಷಿಯ ಮೂಲ ಪಾಠ. ಈ ಪದ್ಧತಿಯನ್ನು ಅಳವಡಿಸಿಕೊಂಡು ಹಲವಾರು ಬೆಳೆಗಳನ್ನು ಬೆಳೆಯುವುದರ ಜೊತೆಗೆ ಸಾವಯವ ಪದ್ಧತಿಯಿಂದಲೂ ಕೆಲವು ಬೆಳೆಗಳನ್ನು ರೈತ ವೆಂಕಟಸ್ವಾಮಿರೆಡ್ಡಿ ಬೆಳೆಯುತ್ತಿದ್ದಾರೆ. ಜೇನುಸಾಕಣೆ, ಸೀಮೆಹಸುಗಳು, ಕುರಿಗಳು, ಕೋಳಿಗಳನ್ನೂ ಸಾಕಿರುವ ಇವರು ಕೃಷಿ ತ್ಯಾಜ್ಯಗಳಿಂದ ಗೋಬರ್ ಗ್ಯಾಸ್ ಅನಿಲ, ರಸಸಾರ ತೊಟ್ಟಿ ಹಾಗೂ ಕಾಂಪೋಸ್ಟ್‌ಗಳನ್ನೂ ನಿರ್ಮಿಸಿಕೊಂಡಿದ್ದಾರೆ. ದನಗಳಿಗೆ ಆಹಾರವಾಗಿ ಅಜೋಲ ಬೆಳೆಸಿದ್ದಾರೆ.
ಅರಿಶಿನ, ಈರುಳ್ಳಿ, ಬೆಳ್ಳುಳ್ಳಿ, ಧನಿಯಾ, ಅರಿವೆ ಸೊಪ್ಪು, ದಂಟಿನಸೊಪ್ಪು, ಕೊತ್ತಂಬರಿಸೊಪ್ಪು, ಪಾಲಕ್, ಸಬಾಕ್ಷಿಸೊಪ್ಪು, ಕರಿಬೇವು, ರಾಗಿ, ಮುಸುಕಿನ ಜೋಳ, ಸಾಸಿವೆ, ಅವರೆ, ಬದನೇಕಾಯಿ, ಬೆಂಡೇಕಾಯಿ, ನಿಂಬೆಹಣ್ಣು, ಹುಣಸೆಹಣ್ಣು, ಅರಳು, ಹೊಂಗೆಬೀಜ, ಬೇವು, ಮೆಣಸಿನಕಾಯಿ, ನುಗ್ಗೇಕಾಯಿ, ಸಪೋಟಾ, ತೆಂಗು, ಮಾವು, ಗೋಡಂಬಿ, ಸಿಹಿಗುಂಬಳ, ಸೋರೇಕಾಯಿ, ಜೇನು, ಹಿಪ್ಪುನೇರಳೆ, ಹಾಲು, ಹಲಸು, ಗೆಣಸು, ಚಪ್ಪರದವರೆ, ಕಾಕಿಜೋಳ, ಪುದೀನ, ಶುಂಠಿ, ಅಂಟವಾಳ, ವೆಲ್‌ವೆಟ್ ಬೀನ್ಸ್ ಹಾಗೂ ಅಗಸೆ ಇವರ ಕಳೆದ ವರ್ಷದ ಕೃಷಿ ಉತ್ಪನ್ನಗಳು.
ಸಪೋಟ, ತೆಂಗು, ಮಾವು ಮುಂತಾದ ತೋಟಗಾರಿಕಾ ಬೆಳೆಗಳ ನಡುವೆ ಒಂದೂವರೆ ಎಕರೆ ಪ್ರದೇಶದಲ್ಲಿ ಅರಿಶಿನವನ್ನು ಸಾವಯವ ಪದ್ಧತಿಯಲ್ಲಿ ಬೆಳೆದು ಉತ್ತಮ ಗುಣಮಟ್ಟದ ಸುಮಾರು ೨೦ ಕ್ವಿಂಟಾಲಿನಷ್ಟು ಇಳುವರಿಯನ್ನು ಪಡೆದಿದ್ದಾರೆ.
‘ಅರಿಶಿನ ೯ ರಿಂದ ೧೦ ತಿಂಗಳ ಬೆಳೆ. ಮೇ ತಿಂಗಳ ಭರಣಿ ಮಳೆಯ ಸಮಯದಲ್ಲಿ ಸಾಮಾನ್ಯವಾಗಿ ಇದರ ನಾಟಿ ಕಾರ್ಯ ಮಾಡಲಾಗುತ್ತದೆ. ನಾವಿದನ್ನು ಮಿಶ್ರ ಬೆಳೆಯಾಗಿ ಬೆಳೆದಿರುವುದರಿಂದ ಬೆಳೆಯಷ್ಟೂ ಲಾಭದಾಯಕವಾಗಿದೆ. ನಮ್ಮ ಭೂಮಿಯನ್ನು ೧೨ ವರ್ಷಗಳಿಂದ ರಾಸಾಯನಿಕ ಮುಕ್ತವಾಗಿರಿಸಿರುವುದರಿಂದ ಸಂಪೂರ್ಣ ಸಾವಯವ ಪದ್ಧತಿಯಿಂದ ಅರಿಶಿನವನ್ನು ಬೆಳೆದಿದ್ದೇನೆ. ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿಯ ಜೊತೆಗೆ ಡ್ರಿಪ್ ಮೂಲಕ ರಸಸಾರವನ್ನು ಹರಿಸಿರುವುದರಿಂದ ಬೆಳೆ ತುಂಬ ಚೆನ್ನಾಗಿ ಬಂದಿದೆ.’
‘ಅರಿಶಿನದ ಕುಯಿಲಾದ ನಂತರ ಬೇರು ಕಾಂಡ ಗೆಡ್ಡೆಗಳನ್ನೆಲ್ಲಾ ಬೇರ್ಪಡಿಸಿ ರಾಶಿಹಾಕಿ ಅದರ ಮೇಲೆ ಎಲೆಗಳನ್ನು ಹೊದಿಸಿ ಗೆಡ್ಡೆಗಳು ಶಾಖಕ್ಕೆ ಬೆವರುವಂತೆ ಮಾಡಿ ಅನಂತರ ಸಂಸ್ಕರಿಸಬೇಕು. ಬಣ್ಣಗಳ ತಯಾರಿಕೆ ಹಾಗೂ ಔಷಧೀಯ ಬಳಕೆಯಿರುವುದರಿಂದ ಇದಕ್ಕೆ ಬಹುವಾಗಿ ಬೇಡಿಕೆಯಿದೆ. ಸಂಪೂರ್ಣ ಸಾವಯವದಲ್ಲಿ ಬೆಳೆದಿರುವುದರಿಂದ ಹಾಗೂ ರಾಸಾಯನಿಕ ಬೆರೆಯದಿರುವುದರಿಂದ ಈ ಅರಿಶಿನದ ಗುಣಮಟ್ಟ ಹೆಚ್ಚಿನದ್ದು. ರೈತರು ಸಾವಯವದಲ್ಲಿ ಅರಿಶಿನ ಬೆಳೆಯಲು ಮುಂದಾದಲ್ಲಿ ನಾನು ಗೆಡ್ಡೆಗಳನ್ನು ಕೊಡುತ್ತೇನೆ’ ಎನ್ನುತ್ತಾರೆ ರೈತ ವೆಂಕಟಸ್ವಾಮಿರೆಡ್ಡಿ.
‘ಕೃಷಿಯ ಅಂತಿಮ ಉದೇಶ ಬೆಳೆ ಬೆಳೆಯುವುದಲ್ಲ. ಬದಲಾಗಿ ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಅಡಿಪಾಯ ಹಾಕುವುದು ಎಂದು ಹೇಳಿದ ಫುಕುವೊಕ ಅವರ ಮಾತುಗಳು ಎಲ್ಲ ರೈತರಿಗೂ ಪ್ರೇರಣೆಯಾಗಬೇಕು. ಪ್ರಕೃತಿಯ ಭಾಗವಾದ ಕಲ್ಲು, ಮಣ್ಣು, ನೀರು ಗಾಳಿ, ಅಗ್ನಿ, ಆಕಾಶ, ಪ್ರಾಣಿ, ಸಸ್ಯ, ಬ್ಯಾಕ್ಟೀರಿಯಾ, ಎರೆಹುಳು ಎಲ್ಲವೂ ಅವಯವಗಳೇ ಆಗಿವೆ. ಈ ಅವಯವಗಳನ್ನು ಬಳಸುವ ಹಾಗೂ ಹೆಚ್ಚಿಸುವ ಕೃಷಿ ವಿಧಾನವೇ ಸಾವಯವ’ ಎಂದು ಅವರು ತಿಳಿಸಿದರು.
- Advertisement -
- Advertisement -
- Advertisement -
- Advertisement -