Home News ಲಕ್ಷ್ಮೀ ಶ್ರೀನಿವಾಸರ ವೈಕುಂಠ ದರ್ಶನ

ಲಕ್ಷ್ಮೀ ಶ್ರೀನಿವಾಸರ ವೈಕುಂಠ ದರ್ಶನ

0

ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿಯು ವೈಕುಂಠ ಏಕಾದಶಿ ಎಂಬ ವಿಶೇಷ ದಿನವೆಂದು ಭಾನುವಾರ ತಾಲ್ಲೂಕಿನ ಪ್ರಮುಖ ವೆಂಕಟೇಶ್ವರ, ಶ್ರೀನಿವಾಸ, ವಿಷ್ಣು ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಏರ್ಪಡಿಸಿದ್ದರು. ಎಲ್ಲಾ ದೇವಸ್ಥಾನಗಳಲ್ಲಿ ಜನಸಂದಣಿ ಹೆಚ್ಚಿದ್ದು, ಕೆಲವು ದೇವಸ್ಥಾನಗಳಲ್ಲಿ ನಿರ್ಮಿಸಿದ್ದ ವೈಕುಂಠ ದ್ವಾರದ ಒಳಗೆ ಹೋಗಿ ಬಂದರೆ ಮೋಕ್ಷ ಸಿಗುವುದೆಂಬ ನಂಬಿಕೆಯಿಂದ ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ತಾಲ್ಲೂಕಿನ ಮಳ್ಳೂರು ಗ್ರಾಮದ ಹೊರವಲಯದ ಸಾಯಿನಾಥ ಜ್ಞಾನ ಮಂದಿರದಲ್ಲಿ ವೈಕುಂಠದ ದರ್ಶನಕ್ಕೆ ದ್ವಾರಗಳನ್ನು ಸ್ಥಾಪಿಸಿದ್ದು, ಸಪ್ತದ್ವಾರಗಳನ್ನು ದಾಟುತ್ತಿದ್ದಂತೆಯೇ ಲಕ್ಷ್ಮೀ ಶ್ರೀನಿವಾಸರ ಅಲಂಕೃತ ಬೃಹತ್‌ ಮೂರ್ತಿಗಳ ದರ್ಶನ ಸಿಗುವಂತೆ ಮಾಡಲಾಗಿತ್ತು. ಸುತ್ತಮುತ್ತಲಿನ ಗ್ರಾಮಗಳು ಹಾಗೂ ತಾಲ್ಲೂಕಿನಿಂದ ಆಗಮಿಸಿದ್ದ ಭಕ್ತರು ಸಾಲಾಗಿ ಸಾಗುತ್ತಾ ದೇವರ ದರ್ಶನ ಪಡೆದರು. ಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆಯನ್ನೂ ದೇವಾಲಯದಲ್ಲಿ ಆಯೋಜಿಸಿದ್ದರು.

ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದ ಹೊರವಲಯದ ಸಾಯಿನಾಥ ಜ್ಞಾನ ಮಂದಿರದಲ್ಲಿ ದೇವರ ದರ್ಶನವನ್ನು ಸಾಲಿನಲ್ಲಿ ತೆರಳಿ ಭಕ್ತರು ಪಡೆದರು.
ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದ ಹೊರವಲಯದ ಸಾಯಿನಾಥ ಜ್ಞಾನ ಮಂದಿರದಲ್ಲಿ ದೇವರ ದರ್ಶನವನ್ನು ಸಾಲಿನಲ್ಲಿ ತೆರಳಿ ಭಕ್ತರು ಪಡೆದರು.

ತಾಲ್ಲೂಕಿನ ಮೇಲೂರು ಗ್ರಾಮದ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಭಕ್ತರಿಗಾಗಿ ವೈಕುಂಠ ಉತ್ತರ ದ್ವಾರ ದರ್ಶನ ಏರ್ಪಡಿಸಲಾಗಿತ್ತು. ಸುಪ್ರಭಾತ, ವಿಷ್ಣು ಸಹಸ್ರನಾಮ, ವಿಶ್ವಕ್ಸೇನ ಪೂಜೆ, ಪುಣ್ಯಾಹವಾಚನ, ಪಂಚಾಮೃತಾಭಿಷೇಕ, ರಾಷ್ಟ್ರಾಶೀರ್ವಾದ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗವನ್ನು ನಡೆಸಲಾಯಿತು.
ತಾಲ್ಲೂಕಿನ ಚೌಡಸಂದ್ರದ ಸೋಮೇಶ್ವರಸ್ವಾಮಿ ದೇವಸ್ಥಾನ, ತಲಕಾಯಲಬೆಟ್ಟದ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯ, ಚಿಕ್ಕದಾಸರಹಳ್ಳಿ ಬಳಿಯ ಬ್ಯಾಟರಾಯಸ್ವಾಮಿ ದೇವಾಲಯ, ಜಂಗಮಕೋಟೆ ಬಳಿಯ ಮುತ್ಯಾಲಮ್ಮ ದೇವಸ್ಥಾನ, ಒಡಯನಕೆರೆಯ ಅನಂತಪದ್ಮನಾಭಸ್ವಾಮಿ ದೇವಾಲಯ, ದೊಡ್ಡದಾಸೇನಹಳ್ಳಿ ಗ್ರಾಮದ ಲಕ್ಷ್ಮಿವೆಂಕಟೇಶ್ವರಸ್ವಾಮಿ ದೇವಾಲಯ, ಹೌಸಿಂಗ್‌ ಬೋರ್ಡ್‌ನ ಗಾಯಿತ್ರಿ ದೇವಸ್ಥಾನ, ವಾಸವಿ ರಸ್ತೆಯ ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳನ್ನು ನಡೆಸಲಾಗಿತ್ತು.
‘ವೈಕುಂಠವನ್ನು ದರ್ಶಿಸಿ ಭಕ್ತರು ಸಾಯಿನಾಥ, ಗಣೇಶ, ಅಯ್ಯಪ್ಪ, ಸುಬ್ರಮಣ್ಯ ಸ್ವಾಮಿಯವರ ದರ್ಶನವನ್ನು ಹಾಗೂ ಪೂಜೆಯನ್ನು ನಡೆಸಿಕೊಂಡು ಪ್ರಸಾದವನ್ನು ತೆಗೆದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ’ ಎಂದು ಸಾಯಿನಾಥ ಜ್ಞಾನ ಮಂದಿರದ ಧರ್ಮದರ್ಶಿ ನಾರಾಯಣಸ್ವಾಮಿ ತಿಳಿಸಿದರು.