Home News ರೈತ ಆಸಕ್ತ ಗುಂಪುಗಳ ಉದ್ಘಾಟನೆ

ರೈತ ಆಸಕ್ತ ಗುಂಪುಗಳ ಉದ್ಘಾಟನೆ

0

ಬಯಲುಸೀಮೆ ಭಾಗದ ರೇಷ್ಮೆ ಬೆಳೆಗಾರರು ಬೆಳೆಯುವ ರೇಷ್ಮೆ ಗೂಡು ಉತ್ಪಾದನೆ ಹೆಚ್ಚು ಮಾಡುವುದು, ಉತ್ಪಾದನೆಗೆ ತಕ್ಕಂತೆ ಮಾರುಕಟ್ಟೆ ವ್ಯವಸ್ಥೆ ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ರೈತ ಆಸಕ್ತ ಗುಂಪುಗಳನ್ನು ರಚಿಸಲಾಗುತ್ತಿದೆ ಎಂದು ರೇಷ್ಮೆ ಇಲಾಖೆಯ ಉಪನಿರ್ದೇಶಕ ಬಿ.ಆರ್.ನಾಗಭೂಷಣ್ ಹೇಳಿದರು.
ತಾಲ್ಲೂಕಿನ ದೇವರಮಳ್ಳೂರಿನಲ್ಲಿ ರೇಷ್ಮೆ ಇಲಾಖೆ ಮತ್ತು ಮೈರಾಡ ಸಂಸ್ಥೆಯ ಸಹಯೋಗದಲ್ಲಿ ರೇಷ್ಮೆ ರೈತ ಉತ್ಪಾದಕ ಸಂಸ್ಥೆ (ಎಫ್.ಪಿ.ಓ) ಯೋಜನೆಯಡಿ ಶನಿವಾರ ನಡೆದ ರೈತ ಆಸಕ್ತ ಗುಂಪುಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ರೈತರಿಗೆ ನೂತನ ತಾಂತ್ರಿಕತೆ ಹಾಗೂ ಕೌಶಲ್ಯ ಅಭಿವೃದ್ಧಿ ತರಭೇತಿ ನೀಡುವುದು, ರೇಷ್ಮೆ ಬೆಳೆಗಾರರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಮಧ್ಯವರ್ತಿಗಳ ಹಾವಳಿ ತಡೆಯುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ ಎಂದರು.
ಸಮಾನ ಮನಸ್ಕ ರೇಷ್ಮೆ ಬೆಳೆಗಾರರನ್ನು ಒಂದುಗೂಡಿಸಿ ೨೦ ಮಂದಿಯಿರುವ ಸುಮಾರು ೫೦ ಗುಂಪುಗಳನ್ನು ರಚಿಸಲು ತಾಲ್ಲೂಕಿನಲ್ಲಿ ಹೆಚ್ಚಾಗಿ ರೇಷ್ಮೆ ಬೆಳೆಗಾರರಿರುವ ನಾಲ್ಕೈದು ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಇದರ ಮಾರ್ಗದರ್ಶನವನ್ನು ಮೈರಾಡ ಸಂಸ್ಥೆ ನೆರವೇರಿಸಿದರೆ ಹಣಕಾಸಿನ ನೆರವನ್ನು ರೇಷ್ಮೆ ಇಲಾಖೆ ನಿರ್ವಹಿಸುತ್ತದೆ. ಪ್ರತಿ ಸದಸ್ಯರೂ ಒಂದು ಸಾವಿರ ರೂಗಳ ಷೇರು ಹಣವನ್ನು ಹಾಗೂ ಒಂದು ನೂರು ರೂಗಳ ನಿರ್ವಹಣಾ ವೆಚ್ಚವನ್ನು ನೀಡಬೇಕು. ಒಂದು ಗುಂಪಿನಲ್ಲಿ ಸಂಗ್ರಹವಾದ ಷೇರು ಹಣದಷ್ಟೇ ಹಣವು ಸರ್ಕಾರ ನೀಡುತ್ತದೆ. ಒಟ್ಟು ಮೊತ್ತದಿಂದ ಸಂಘದ, ರೈತರ ಆರ್ಥಿಕ ಅಭಿವೃದ್ಧಿ ಮಾಡಬಹುದು ಎಂದರು.
ಮೈರಾಡ ಸಂಸ್ಥೆಯ ಕೋಲಾರ -ಚಿಕ್ಕಬಳ್ಳಾಪುರ ಜಿಲ್ಲೆಯ ಕಾರ್ಯಕ್ರಮ ಅಧಿಕಾರಿ ಶಿವಶಂಕರ್ ಮಾತನಾಡಿ ರೈತ ಆಸಕ್ತ ಗುಂಪು ರಚಿಸುವುದರಿಂದ ರೈತರ ಉತ್ಪಾದನೆ ಹೆಚ್ಚಾಗುವುದರ ಜೊತೆಗೆ ತಾವು ಬೆಳೆದ ರೇಷ್ಮೆ ಗೂಡಿಗೆ ಉತ್ತಮ ಬೆಲೆ ನಿಗಧಿ ಪಡಿಸುವ ಅವಕಾಶವೂ ಇರುತ್ತದೆ. ಉತ್ಪಾದನೆಗೆ ತಕ್ಕಂತೆ ಮಾರುಕಟ್ಟೆಯ ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸಹಾಕರಿಯಾಗುತ್ತದೆ ಎಂದರು.
ರೈತ ಆಸಕ್ತ ಗುಂಪುಗಳನ್ನು ರಚಿಸಿಕೊಂಡರೆ ತಮ್ಮದೇ ಷೇರು ಮೊತ್ತದ ಜೊತೆಗೆ ಇಲಾಖೆಯಿಂದ ಸಿಗುವ ಸಹಾಯಧನವನ್ನು ಬಳಸಿಕೊಂಡು ಚಾಕಿ ಸಾಕಾಣಿಕೆ ಕೇಂದ್ರ, ರಸಗೊಬ್ಬರ ಮಳಿಗೆ ನಿರ್ಮಿಸಿಕೊಂಡರೆ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಜೊತೆಗೆ ತಮ್ಮ ಆದಾಯವೂ ಹೆಚ್ಚಾಗುತ್ತದೆ. ಹಾಗಾಗಿ ರೇಷ್ಮೆ ಬೆಳೆಗಾರರು ೨೦ ಮಂದಿಯನ್ನೊಳಗೊಂಡ ಒಂದೊಂದು ಗುಂಪು ರಚಿಸಿಕೊಂಡು ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ರೇಷ್ಮೆ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ ಹಾಗು ರೇಷ್ಮೆ ರೈತ ಉತ್ಪಾದಕ ಸಂಸ್ಥೆಯ ಜಿಲ್ಲಾ ಸಂಯೋಜಕ ವೆಂಕಟರೆಡ್ಡಿ ಎಸ್ ಗಿರಣಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಮಳ್ಳೂರಂಭ ರೈತ ಆಸಕ್ತ ಗುಂಪಿನ ಸದಸ್ಯರಿಗೆ ಪುಸ್ತಕ ಹಾಗು ಲೇಖನಿ ವಿತರಿಸಲಾಯಿತು.
ರೇಷ್ಮೆ ವಿಸ್ತರಣಾಧಿಕಾರಿ ಎಂ.ನಾರಾಯಣಸ್ವಾಮಿ, ರೇಷ್ಮೆ ಪ್ರದರ್ಶಕ ಎಸ್.ಎಂ. ಪ್ರಕಾಶ್, ಬಿ. ಎಲ್. ಮುನಿರಾಜು, ಗ್ರಾಮದ ಮುಖಂಡರಾದ ಬಿ.ಕೆಂಪಣ್ಣ, ಎಸ್.ಕೆಂಪಣ್ಣ, ಆಂಜಿನಪ್ಪ, ನಾರಾಯಣಸ್ವಾಮಿ, ಜಯರಾಂ, ರೆಡ್ಡಿಸ್ವಾಮಿ, ದೇವರಾಜ್ ಮತ್ತಿತರರು ಹಾಜರಿದ್ದರು.