ವಿದ್ಯುತ್ ಮೀಟರ್ ತಯಾರಿಕೆ ಕಂಪನಿಗಳ ಆಮಿಷಕ್ಕೆ ಒಳಗಾಗಿರುವ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಅವರು ನೀಡುವ ಕಮೀಷನ್ ಹಣಕ್ಕೆ ಆಸೆ ಬಿದ್ದು ರೈತರ ಪಂಪ್ಸೆಟ್ಗಳಿಗೆ ಮೀಟರು ಅಳವಡಿಸಲು ಮುಂದಾಗಿದ್ದಾರೆ ಎಂದು ರೈತ ಸಂಘ ಹಾಗು ಹಸಿರು ಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಆರೋಪಿಸಿದರು.
ರೈತರ ಪಂಪ್ಸೆಟ್ಗಳಿಗೆ ವಿದ್ಯುತ್ ಮೀಟರ್ ಅಳವಡಿಸುತ್ತಿರುವ ಕ್ರಮ ಖಂಡಿಸಿ ಪಟ್ಟಣದ ಬೆಸ್ಕಾಂ ಕಚೇರಿಗೆ ಮೀಟರ್ಗಳ ಸಮೇತವಾಗಿ ರೈತರು ಮುತ್ತಿಗೆ ಹಾಕಿದ್ದರ ಹಿನ್ನಲೆಯಲ್ಲಿ ಬೆಸ್ಕಾಂ ಅಧಿಕಾರಿಗಳು ಶನಿವಾರ ಕರೆದಿದ್ದ ರೈತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ರೈತರ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆ ಮಾಡಲು ಅಧಿಕಾರಿಗಳು ಮುಂದಾಗಿದ್ದೇ ಆದಲ್ಲಿ ಅದೇ ವಿದ್ಯುತ್ ಕಂಬಗಳಿಗೆ ಕಟ್ಟಿಹಾಕುತ್ತೇವೆ. ಈ ಹಿಂದೆ ಎರಡು ಬಾರಿ ಪಟ್ಟಣದ ಸುತ್ತಮುತ್ತಲಿನ ರೈತರ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆಯನ್ನು ನಿಲ್ಲಿಸುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿತ್ತಾದರೂ ಕೆಲವು ಮಂದಿ ಲೈನ್ಮೆನ್ಗಳು ರೈತರಿಗೆ ಬೆದರಿಕೆಯೊಡ್ಡಿ ಮೀಟರುಗಳನ್ನು ಅಳವಡಿಸಿದ್ದುದನ್ನು ಖಂಡಿಸಿ ಇಲಾಖೆಗೆ ಮುತ್ತಿಗೆಯೂ ಹಾಕಲಾಗಿತ್ತು ಎಂದರು.
ಈ ಭಾಗದಲ್ಲಿ ಅಂತರ್ಜಲ ಕುಸಿದು ೧೫೦೦ ಅಡಿಗಳಿಂದ ನೀರು ತೆಗೆಯುತ್ತಿದ್ದು ಸಿಗುವ ಅಲ್ಪ ಪ್ರಮಾಣದ ನೀರಿನಲ್ಲಿ ರೈತ ವ್ಯವಸಾಯ ಮಾಡುತ್ತಿದ್ದಾನೆ. ಅಂತಹ ರೈತನ ಬೆನ್ನ ಮೇಲೆ ಬರೆ ಹಾಕುವ ಕೆಲಸಕ್ಕೆ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಮಾಡಬಾರದು ಎಂದರು.
ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ ಕಳೆದ ಎರಡು ದಶಕಗಳಿಂದ ಈ ಭಾಗದ ರೈತರಿಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಟಾನಗೊಳಿಸಬೇಕೆಂದು ನಿರಂತರ ಹೋರಾಟ ಮಾಡಿಕೊಂಡು ಬಂದಿರುವ ರೈತರ ತೋಟಗಳಿಗೆ ಅಳವಡಿಸಿರುವ ಪಂಪ್ಸೆಟ್ಗಳಿಗೆ ವಿದ್ಯುತ್ ಮೀಟರು ಅಳವಡಿಕೆ ಮಾಡಲು ಹೊರಟಿರುವ ಕ್ರಮ ಸರಿಯಿಲ್ಲ. ಈವರೆಗೂ ಶಾಂತರೀತಿಯಲ್ಲಿ ಹೋರಾಟ ಮಾಡಿಕೊಂಡು ಬಂದಿರುವ ನಾವು ಉಗ್ರಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬೆಸ್ಕಾಂ ಇಲಾಖೆಯ ಪ್ರಭಾರಿ ಎಇಇ ಅನ್ಸರ್ಪಾಷಾ ಮಾತನಾಡಿ ವಿದ್ಯುತ್ ಟ್ರಾನ್ಸ್ಫರ್ಗಳ ಹತ್ತಿರ ಮೀಟರುಗಳನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ರೈತರ ಪಂಪ್ಸೆಟ್ಗಳಿಗೆ ಮೀಟರ್ಗಳನ್ನು ಅಳವಡಿಕೆ ಮಾಡುವುದಿಲ್ಲ ಎಂದು ಭರವಸೆ ನೀಡಿದರು.
ರೈತ ಮುಖಂಡರಾದ ಮುನಿನಂಜಪ್ಪ, ಓ.ಟಿ.ಮುನಿಕೃಷ್ಣಪ್ಪ, ರಾಮಕೃಷ್ಣಪ್ಪ, ವೇಣುಗೋಪಾಲ್, ಅನಂತ್, ಮಂಜುನಾಥ್, ಪರಮೇಶ್ವರ್, ಪುರುಷೋತ್ತಮ್, ದೇವರಾಜು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.