ರೈತರು ತಮ್ಮ ಬೆಳೆಗಳಿಗೆ ತಪ್ಪದೆ ವಿಮೆ ಮಾಡಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಿ.ಬಿ.ಕಾವೇರಿ ಹೇಳಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ, ಕಂಬದಹಳ್ಳಿ, ಮೇಲೂರು ಮುಂತಾದ ಕಡೆಗಳಲ್ಲಿ ಬಿದ್ದಿದ್ದ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ನಷ್ಟಕ್ಕೀಡಾಗಿದ್ದ ಪ್ರದೇಶಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಲಕ್ಷಾಂತರ ರೂಪಾಯಿಗಳ ಬಂಡವಾಳ ಹೂಡಿ, ಬೆಳೆಗಳನ್ನು ಇಡುವಂತಹ ರೈತರು ತಮ್ಮ ಬೆಳೆಗಳಿಗೆ ವಿಮೆಯನ್ನು ಮಾಡಿಸುವಲ್ಲಿ ಹಿಂದೆ ಇದ್ದಾರೆ, ಇದರಿಂದಾಗಿ ಪ್ರಕೃತಿ ವಿಕೋಪಗಳು ಸಂಭವಿಸಿದಾಗ, ಅಪಾರ ಪ್ರಮಾಣದಲ್ಲಿ ಬೆಳೆಗಳು ನಷ್ಟವಾದಾಗ ಸರ್ಕಾರದಿಂದ ಬರುವಂತಹ ಸಹಾಯಧನಕ್ಕಿಂತ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ವಿಮಾ ಸೌಲಭ್ಯ ಸಿಗಲಿದ್ದು, ರೈತರಿಗೆಅಗತ್ಯವಾಗಿರುವ ಎಲ್ಲಾ ಮಾಹಿತಿಗಳನ್ನು ಅಧಿಕಾರಿಗಳು ನೀಡಬೇಕು. ವಿಮಾ ಸೌಲಭ್ಯಗಳ ಬಗ್ಗೆ ದ್ರಾಕ್ಷಿ ಬೆಳೆಗಾರರ ಸಂಘಗಳಿಗೆ ಮಾಹಿತಿಗಳನ್ನು ನೀಡಿ, ವ್ಯಾಪಕ ಪ್ರಚಾರ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಸುಮಾರು ೧೦ ಕೋಟಿ ರೂಪಾಯಿಗಳಷ್ಟು ಬೆಳೆಗಳು ನಷ್ಟವಾಗಿವೆ, ಈ ಬಗ್ಗೆ ಪರಿಶೀಲನೆ ನಡೆಸಿ, ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗುತ್ತದೆ ಎಂದರು.
ಇದೇ ವೇಳೆ ಅಪಾರ ಪ್ರಮಾಣದಲ್ಲಿ ದ್ರಾಕ್ಷಿ, ಮಾವು, ತರಕಾರಿ ಬೆಳೆಗಳು ನಷ್ಟವುಂಟಾಗಿವೆ, ದ್ರಾಕ್ಷಿಯನ್ನು ಪ್ರತಿ ಕೆ.ಜಿಗೆ ೩೦ ರೂಪಾಯಿಗಳಂತೆ ಮಾರಾಟ ಮಾಡಿದ್ದೆವು, ೫೦ ಸಾವಿರ ಮುಂಗಡ ಹಣವನ್ನು ನೀಡಿದ್ದರು, ಅಕಾಲಿಕ ಮಳೆಯಿಂದಾಗಿ ಬೆಳೆ ನಷ್ಟವಾಗಿರುವುದರಿಂದ ಕೆ.ಜಿ.ದ್ರಾಕ್ಷಿಯನ್ನು ೮ ರೂಪಾಯಿಗಳಿಗೆ ಕೇಳುತ್ತಿದ್ದಾರೆ, ಮುಂಗಡ ಹಣವನ್ನು ವಾಪಸ್ಸು ಪಡೆದುಕೊಂಡು ಹೋಗಿದ್ದಾರೆ, ಮಾರುಕಟ್ಟೆಯ ಸೌಲಭ್ಯವಿಲ್ಲ, ಅವರು ಕೇಳಿದ ಧರಕ್ಕೆ ದ್ರಾಕ್ಷಿಯನ್ನು ಮಾರಾಟ ಮಾಡಬೇಕು, ಮಾರಾಟ ಮಾಡಿದ ನಂತರ ಕಟಾವು ಮಾಡಬೇಕಾದರೂ, ಏಜೆಂಟರ ಬಳಿಯಲ್ಲಿ ಹೋಗಿ ಗೋಗರೆಯಬೇಕು, ಅವರು ನೀಡುವಂತಹ ಬಿಲ್ಲುಗಳು ಅಧಿಕೃತವಾಗಿರುವುದಿಲ್ಲ, ಒಂದುಚೀಟಿಯಲ್ಲಿ ಬರೆದುಕೊಡುತ್ತಾರೆ, ಆ ಚೀಟಿಗಳು ಕಳೆದು ಹೋದರೆ ನಾವು ದ್ರಾಕ್ಷಿಯನ್ನು ಮಾರಾಟ ಮಾಡಿರುವ ಬಗ್ಗೆ ಖಾತ್ರಿಯಿರುವುದಿಲ್ಲ, ಆದ್ದರಿಂದ ರೈತರಿಗೆ ಮಾರುಕಟ್ಟೆಯ ಸೌಲಭ್ಯವನ್ನು ಕಲ್ಪಿಸಿಕೊಡುವಂತೆ ರೈತಗೋವಪ್ಪ ಅಧಿಕಾರಿಗಳ ಬಳಿಯಲ್ಲಿ ಮನವಿ ಮಾಡಿದರು.
ತೋಟಗಾರಿಕಾ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ಎಂ.ಗಾಯಿತ್ರಿ ಮಾತನಾಡಿ, ಮಹಾರಾಷ್ಟ್ರದ ಮಾದರಿಯಲ್ಲಿ ದ್ರಾಕ್ಷಿ ಬೆಳೆಗಾರರ ಸಂಘಗಳ ಮುಖಾಂತರವೇ ದರವನ್ನು ನಿಗಧಿ ಮಾಡುವಂತಹ ವ್ಯವಸ್ಥೆಯನ್ನು ಮಾಡಲು ಚಿಂತನೆ ನಡೆಸಲಾಗಿದೆ ಎಂದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಡಿ.ಎಸ್.ಗುರುಬಸಪ್ಪ, ರೇಷ್ಮೆಇಲಾಖೆಯ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ಕೃಷಿ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ತೋಟಗಾರಿಕಾ ಸಹಾಯಕ ನಿರ್ದೇಶಕ ಆನಂದ್ ಮುಂತಾದವರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -