ಪೊಲೀಸರ ಲಾಠಿ ಏಟಿನಿಂದ ಜರ್ಜರಿತರಾಗಿರುವ ರೈತರಿಗೆ ಮತ್ತೊಂದು ತೂಗುಕತ್ತಿ ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಶನಿವಾರ ಕಾದುನಿಂತಿದೆ.
ಶಿಡ್ಲಘಟ್ಟ ರೇಷ್ಮೆ ಗೂಡಿನ ಮಾರುಕಟ್ಟೆಗೆ ಶುಕ್ರವಾರ 900 ಗೂಡು ಆವಕವಾಗಿತ್ತು. ಆಗಮಿಸಿದ್ದ ಸುಮಾರು 50 ಟನ್ ರೇಷ್ಮೆ ಗೂಡಿನಿಂದ ಸುಮಾರು 2 ಕೋಟಿ ರೂಗಳಷ್ಟು ವಹಿವಾಟು ಸಾಧ್ಯವಿತ್ತು. ಆದರೆ, ಬೆಂಗಳೂರಿನಲ್ಲಿ ಶಾಶ್ವತ ನೀರಿನ ಕೂಗು ವಿಧಾನಸೌಧಕ್ಕೆ ಮುಟ್ಟಿಸಲು ಹೋದ ರೈತರನ್ನು ಅಮಾನುಷವಾಗಿ ಹೊಡೆದಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮಾರುಕಟ್ಟೆಯಲ್ಲಿ ಗೂಡಿನ ಹರಾಜನ್ನು ನಿಲ್ಲಿಸಲಾಯಿತು. ಇದರಿಂದಾಗಿ ಒಂದೆಡೆ ಗೂಡು ತಂದಿದ್ದ ರೈತರು 24 ಗಂಟೆಗಳು ಕಾಯಬೇಕಾದ ಪರಿಸ್ಥಿತಿ ಇದ್ದರೆ, ಮತ್ತೊಂದೆಡೆ ನಾಳೆ ಆವಕವಾಗುವ ಅಷ್ಟೇ ಪ್ರಮಾಣದ ರೇಷ್ಮೆ ಗೂಡಿನಿಂದ ಬೆಲೆ ಕುಸಿಯುವ ಆಂತಕವಿದೆ.
ಶನಿವಾರ ಆಗಮಿಸುವ ರೇಷ್ಮೆ ಗೂಡಿಗೆ ಮಾರುಕಟ್ಟೆಯಲ್ಲಿ ಸ್ಥಳದ ಅಭಾವ ಮತ್ತು ಹೆಚ್ಚು ಗೂಡು ಆವಕವಾಗುವುದರಿಂದಾಗಿ ಗೂಡಿನ ದರ ಕುಸಿತವಾಗುತ್ತದೆ. ನೋವಿನಲ್ಲಿರುವ ರೈತರಿಗೆ ಗಾಯದ ಮೇಲೆ ಉಪ್ಪು ಸವರಿದಂತ ಪರಿಸ್ಥಿತಿ ಈಗ ಮೂಡಿದೆ.
ಕಳೆದ ಕೆಲ ದಿನಗಳಿಂದ ರೇಷ್ಮೆ ಗೂಡಿನ ದರ ಒಂದು ಕೆಜಿಗೆ 400 ರೂಗಳ ಆಸುಪಾಸಿನಲ್ಲಿತ್ತು. ಇದರಿಂದ ರೇಷ್ಮೆ ಬೆಳೆಗಾರರು ಕಳೆದ ವರ್ಷಗಳಲ್ಲಿ ಆದ ನಷ್ಟವನ್ನು ತುಂಬಿಕೊಳ್ಳುವ ಪ್ರಯತ್ನದಲ್ಲಿದ್ದರು. ಈಗ ತಮ್ಮದಲ್ಲದ ತಪ್ಪಿಗೆ ತಾವು ಬಲಿಪಶುಗಳಾಗುವ ಪರಿಸ್ಥಿತಿ ರೈತರದ್ದಾಗಿದೆ.
‘ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಒಮ್ಮೆಗೆ ಎರಡು ಸಾವಿರ ಲಾಟ್ ಬಂದರೆ ಅವನ್ನು ಇಡಲು ಸ್ಥಳವಿರುವುದಿಲ್ಲ. ಬಯಲಲ್ಲಿ ಬಿಸಿಲಲ್ಲಿ ಹಾಕಿದರೆ ಗೂಡು ಹಾಳಾಗುತ್ತದೆ, ರೈತರಿಗೆ ನಷ್ಟವಾಗುತ್ತದೆ. ನಮ್ಮಲ್ಲಿ ಹರಾಜು ಕೂಗುವ ಸಿಬ್ಬಂದಿಯ ಕೊರತೆಯೂ ಇದೆ. ಆದಷ್ಟು ರೇಷ್ಮೆ ಬೆಳೆಗಾರರು ಶನಿವಾರ ಬರದಿದ್ದರೆ, ಅವರಿಗೂ ಒಳಿತು, ನಮಗೂ ಅನುಕೂಲ’ ಎಂದು ರೇಷ್ಮೆ ಗೂಡಿನ ಮಾರುಕಟ್ಟೆಯ ಅಧಿಕಾರಿ ರತ್ನಯ್ಯಶೆಟ್ಟಿ ತಿಳಿಸಿದರು.