Home News ರೇಷ್ಮೆ ಬೆಳೆಯನ್ನು ಚಳಿಗಾಲದಲ್ಲಿ ಉಳಿಸಿಕೊಳ್ಳುವ ಬಗ್ಗೆ ಕರಪತ್ರ ವಿತರಣೆ

ರೇಷ್ಮೆ ಬೆಳೆಯನ್ನು ಚಳಿಗಾಲದಲ್ಲಿ ಉಳಿಸಿಕೊಳ್ಳುವ ಬಗ್ಗೆ ಕರಪತ್ರ ವಿತರಣೆ

0

ಚಳಿಗಾಲ ಹಾಗು ಮಳೆಗಾಲದಲ್ಲಿ ವಾತಾವರಣದಲ್ಲಿ ಶೈತ್ಯಾಂಶ ಹೆಚ್ಚಾಗಿ ರೇಷ್ಮೆ ಹುಳುಗಳಿಗೆ ಸುಣ್ಣಕಟ್ಟು ರೋಗ ಬರುವುದರಿಂದ ರೇಷ್ಮೆ ಹುಳು ಸಾಕಾಣಿಕೆದಾರರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ರೇಷ್ಮೆ ಇಲಾಖೆಯ ಉಪನಿರ್ದೇಶಕ ಬಿ.ಆರ್.ನಾಗಗಭೂಷಣ್ ಹೇಳಿದರು.
ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಮಂಗಳವಾರ ಇಲಾಖೆಯ ಅಧಿಕಾರಿಗಳೊಂದಿಗೆ ರೇಷ್ಮೆ ಹುಳುವಿಗೆ ತಗಲುವ ಸುಣ್ಣಕಟ್ಟು ರೋಗ, ಹಾಲು ತೊಂಡೆ ರೋಗ ಹಾಗೂ ಎಲೆ ಸುರಳಿ ಕೀಟ ನಿಯಂತ್ರಣದ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಲು ಕರಪತ್ರ ವಿತರಿಸಿ ಮಾತನಾಡಿದರು.
ಬುವೇರಿಯಾ ಬ್ಯಾಸಿಯಾನ ಮತ್ತು ಆಸ್ಪರ್ ಜಿಲ್ಲೋಸಿಸ್ ಎಂಬ ಶಿಲೀಂದ್ರಗಳಿಂದ ಹರಡುವ ಈ ರೋಗ ಚಳಿಗಾಲ ಹಾಗು ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕಳೆದ ಇಪ್ಪತ್ತು ದಿನಗಳಿಂದ ಸತತವಾಗಿ ಬೀಳುತ್ತಿರುವ ಮಳೆಯಿಂದ ವಾತಾವರಣದಲ್ಲಿ ಶೈತ್ಯಾಂಶ ಹೆಚ್ಚಾಗಿ ರೇಷ್ಮೆ ಹುಳುವಿಗೆ ಸುಣ್ಣಕಟ್ಟು ರೋಗ ಬರುತ್ತಿದ್ದು, ಸಾಕಾಣಿಕೆದಾರರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು.
ಸುಣ್ಣಕಟ್ಟು ರೋಗ ಬಂದಂತಹ ರೇಷ್ಮೆ ಹುಳುಗಳು ಸೊಪ್ಪು ತಿನ್ನದೇ ಚಟುವಟಿಕೆ ಕಳೆದುಕೊಂಡು ಸಾಯುತ್ತದೆ. ಸತ್ತ ಹುಳುವಿನ ದೇಹವು ಗಟ್ಟಿಯಾಗಿ ಮೈಮೇಲೆ ಬಿಳಿಯ ಪೌಡರ್ನಂತಹ ವಸ್ತುವಿನ ರೂಪದಲ್ಲಿ ವೈರಾಣುಗಳು ಉತ್ಪತ್ತಿಯಾಗುತ್ತವೆ. ಹೀಗೆ ಉತ್ಪತ್ತಿಯಾದ ವೈರಾಣುಗಳು ಗಾಳಿಯ ಮೂಲಕ ಹಾಗೂ ಸತ್ತ ಹುಳುವನ್ನು ಮುಟ್ಟಿದ ಕೈಗಳಿಂದ ಉಳಿದ ಆರೋಗ್ಯವಂತ ಹುಳುವಿಗೆ ತಾಕುವುದರಿಂದ ಎಲ್ಲಾ ಹುಳುಗಳು ಸುಣ್ಣಕಟ್ಟು ರೋಗಕ್ಕೆ ತುತ್ತಾಗಿ ಸಾಯುತ್ತವೆ ಎಂದರು.
ರೇಷ್ಮೆ ಹುಳು ಸಾಕುವ ಮನೆ ಹಾಗೂ ಸಲಕರಣೆಗಳ ಸೋಂಕು ನಿವಾರಣೆ ಕ್ರಮಗಳನ್ನು ಅಗತ್ಯವಾಗಿ ಅಳವಡಿಸಿಕೊಳ್ಳಬೇಕು. ಕೈ ಕಾಲುಗಳನ್ನು ಸ್ವಚ್ಚಗೊಳಿಸದೇ ಹುಳು ಸಾಕಣೆ ಮನೆಗೆ ಪ್ರವೇಶಿಸಬಾರದು. ಅನಗತ್ಯ ವ್ಯಕ್ತಿಗಳ ಪ್ರವೇಶವನ್ನು ಸಂಪೂರ್ಣ ನಿಷೇಧಿಸಬೇಕು. ಹುಳು ಸಾಕಣೆ ಮನೆಯ ಉಷ್ಣಾಂಶ ಹೆಚ್ಚಿಸಲು ಥರ್ಮೋಸ್ಟಾಟ್ ಅಳವಡಿಸಿರುವ ವಿದ್ಯುತ್ ಹೀಟರ್ಗಳಿಂದ ಅಥವ ಹೊಗೆಯಾಡದ ಇದ್ದಿಲು ಕೆಂಡಗಳಿಂದ ಉಷ್ಣಾಂಶ ಹೆಚ್ಚಿಸಬೇಕು. ಮುಖ್ಯವಾಗಿ ಹಾಸಿಗೆಯ ತೇವಾಂಶ ಕಡಿಮೆ ಮಾಡಲು ಹುಳುಗಳನ್ನು ಒತ್ತಾಗಿ ಹಾಕದೇ ತೆಳುವಾಗಿಡುವುದರೊಂದಿಗೆ ಸೊಪ್ಪನ್ನು ತೆಳುವಾಗಿ ನೀಡಬೇಕು ಎಂದರು.
ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸುಣ್ಣಕಟ್ಟು ರೋಗ, ಹಾಲು ತೊಂಡೆ ರೋಗ ಹಾಗೂ ಎಲೆ ಸುರಳಿ ಕೀಟ ನಿಯಂತ್ರಣದ ಬಗ್ಗೆ ಕರಪತ್ರಗಳನ್ನು ರೇಷ್ಮೆ ಇಲಾಖೆಯ ಅಧಿಕಾರಿಗಳು ರೈತರಿಗೆ ವಿತರಿಸಿದರು.
ರೇಷ್ಮೆ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ಮಾರುಕಟ್ಟೆ ಉಪನಿರ್ದೇಶಕ ರತ್ನಯ್ಯಶೆಟ್ಟಿ, ರೇಷ್ಮೆ ವಿಸ್ತರಣಾಧಿಕಾರಿಗಳಾದ ಎಂ.ನಾರಾಯಣಸ್ವಾಮಿ, ತಿಮ್ಮರಾಜು, ರೇಷ್ಮೆ ಸಹಾಯಕ ನಿರ್ದೇಶಕ (ರೀಲಿಂಗ್ವಿಭಾಗ) ನರಸಿಂಹಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.