ತಾಲ್ಲೂಕಿನ ತಲದುಮ್ಮನಹಳ್ಳಿಯ ರೇಷ್ಮೆ ಬೆಳೆಗಾರ ಮಹೇಶ್(26) ಶುಕ್ರವಾರ ಸಾಲಗಾರರ ಕಾಟ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ತಲದುಮ್ಮನಹಳ್ಳಿಗೆ ಶನಿವಾರ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ರೇಷ್ಮೆ ಇಲಾಖೆಯ ಉಪನಿರ್ದೇಶಕ ಡಿ.ಆರ್.ನಾಗಭೂಷಣ್, ರೈತ ಮುಖಂಡರೊಂದಿಗೆ ಭೇಟಿ ನೀಡಿ ಮಹೇಶ್ ಕುಟುಂಬದವರೊಂದಿಗೆ ಮಾತನಾಡಿದರು.
‘ಮೂವ್ವತ್ತೆಂಟು ಗುಂಟೆ ಜಮೀನಿನಲ್ಲಿ ರೇಷ್ಮೆ ಹುಳು ಮನೆ ನಿರ್ಮಿಸಿಕೊಂಡು, ಜಮೀನಿನಲ್ಲಿನ ಕೊಳವೆಬಾವಿಯ ಅತ್ಯಲ್ಪ ನೀರಿನಿಂದ ಹಿಪ್ಪುನೇರಳೆ ಸೊಪ್ಪು ಬೆಳೆಯುತ್ತಾ ರೇಷ್ಮೆ ಕೃಷಿ ಮಾಡುತ್ತಿದ್ದ ಮಹೇಶ್, ಕೈಸಾಲದ ಜೊತೆಗೆ ಜಮೀನನ್ನು ಅಡವಿಟ್ಟು ಖಾಸಗಿಯಾಗಿ ಸಾಲ ಪಡೆದಿದ್ದ. ಎರಡು ಲಕ್ಷ ರೂಗಳ ಸಾಲಕ್ಕೆ ಇದುವರೆಗೂ ಎರಡು ಲಕ್ಷ ರೂಗಳಷ್ಟು ಬಡ್ಡಿಯನ್ನೇ ಕಟ್ಟಿದ್ದರೂ ಕೂಡ, ಸಾಲ ನೀಡಿದ್ದ ವ್ಯಕ್ತಿಮನೆ ಬಳಿ ಬಂದು ಶುಕ್ರವಾರ 75 ಸಾವಿರ ಬಡ್ಡಿ ಬಾಕಿ ಇದೆ. ಹಣ ನೀಡಬೇಕು, ಇಲ್ಲವೇ ಮನೆ ಖಾಲಿ ಮಾಡಬೇಕು ಎಂದು ಹೇಳಿದ್ದ. ಮಹೇಶ್ 50 ಸಾವಿರ ರೂ ಹೊಂದಿಸಿಕೊಂಡು ಬಂದು ಕೊಡಲು ಹೋದಾಗ ತೆಗೆದುಕೊಳ್ಳದೆ, ಅಸಲು ಮತ್ತು ಬಡ್ಡಿ ಸಮೇತ ಹಣ ನೀಡಬೇಕು, ಇಲ್ಲವೇ ಮನೆ ಖಾಲಿ ಮಾಡಬೇಕೆಂದು ಒತ್ತಾಯಿಸಿದ್ದರು. ದಿಕ್ಕು ತೋಚದೆ, ಅವಮಾನ ತಾಳಲಾರದೆ ಮಹೇಶ್ ವಿಷ ಸೇವಿಸಿದ್ದಾನೆ. ತಕ್ಷಣ ಆಸ್ಪತ್ರೆಗೆ ಸೇರಿಸಿದ್ದರಿಂದ ಜೀವ ಉಳಿದಿದೆ’ ಎಂದು ಮಹೇಶ್ ಚಿಕ್ಕಪ್ಪ ರಮೇಶ್ ಅಧಿಕಾರಿಗಳಿಗೆ ತಿಳಿಸಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಮಾತನಾಡಿ, ‘ನೀವು ಲಿಖಿತವಾಗಿ ದೂರು ನೀಡಿದಲ್ಲಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬಹುದಾಗಿದೆ. ರೈತರು ಕಷ್ಟವಿದ್ದಲ್ಲಿ ರೈತಸಂಘದ ಮುಖಂಡರೊಂದಿಗೆ ಅಥವಾ ಅಧಿಕಾರಿಗಳೊಂದಿಗೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ’ ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ತಕ್ಷಣವೇ ಪರಿಹಾರ ಹಣ ಘೋಷಿಸಬೇಕೆಂದು ಅಧಿಕಾರಿಗಳ ವಾಹನಗಳ ಮುಂದೆ ಕುಳಿತು ಘೋಷಣೆಗಳನ್ನು ಕೂಗಿದರು.
ರೇಷ್ಮೆ ಇಲಾಖೆಯ ಉಪನಿರ್ದೇಶಕ ಡಿ.ಆರ್.ನಾಗಭೂಷಣ್ ಮಾತನಾಡಿ, ಮಹೇಶ್ ಅವರ ಹುಳು ಮನೆ ಹಾಗೂ ಹನಿನೀರಾವರಿಗೆ ಈಗಾಗಲೇ ಸಹಾಯಧನ ವಿತರಿಸಿದ್ದೇವೆ. ರೇಷ್ಮೆ ಗೂಡಿನ ಸಹಾಯಧನ 20 ಸಾವಿರ ರೂ ಬಾಕಿಯಿದ್ದು, ಸೋಮವಾರ ನೀಡಲಾಗುತ್ತದೆ. ರೇಷ್ಮೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರವನ್ನು ನೀಡಲಾಗುತ್ತದೆ ಎಂದು ಹೇಳಿದರು.
ಹಸಿರುಸೇನೆ ಮತ್ತು ರೈತಸಂಘದ ರಾಜ್ಯ ಕಾರ್ಯದರ್ಶಿ ಶಿವಪ್ಪ ಮಾತನಾಡಿ,‘ರೇಷ್ಮೆ ಬೆಳೆಗಾರರು ಬೆಲೆ ಕುಸಿತದಿಂದಾಗಿ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಅನಿವಾರ್ಯವಾಗಿ ಖಾಸಗಿಯಾಗಿ ಸಾಲದ ಸುಳಿಗೆ ಸಿಲುಕಿ ಸಾಯುವ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತ. ಖಾಸಗಿ ಸಾಲ ನೀಡಿರುವ ವ್ಯಕ್ತಿಯ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರೈತರಿಗೆ ಬ್ಯಾಂಕುಗಳು ಸುಲಭ ಬಡ್ಡಿ ದರದಲ್ಲಿ ಹಣವನ್ನು ನೀಡಿ ಕಾಪಾಡಬೇಕು. ರೈತರು ತೊಂದರೆ ಬಂದಾಗ ರೈತಸಂಘದವರ ನೆರವು ಪಡೆಯಿರಿ, ಆತ್ಮಹತ್ಯೆಗೆ ಶರಣಾಗದಿರಿ’ ಎಂದು ಹೇಳಿದರು.
ರೇಷ್ಮೆ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ರೈತ ಮುಖಂಡರಾದ ಯಲುವಳ್ಳಿ ಸೊಣ್ಣೇಗೌಡ, ಭಕ್ತರಹಳ್ಳಿ ಬೈರೇಗೌಡ, ಮುನಿನಂಜಪ್ಪ, ರಾಮಚಂದ್ರಪ್ಪ, ಬಚ್ಚೇಗೌಡ, ಸೀನಪ್ಪ, ಶಿವಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.