ತಾಲ್ಲೂಕಿನ ಬಹುತೇಕ ಜನತೆ ರೇಷ್ಮೆ ಉದ್ದಿಮೆಯನ್ನೇ ನಂಬಿದ್ದಾರೆ. ದೇಶದ ಅತಿ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆಯೆಂದು ಹೆಸರಾದ ಶಿಡ್ಲಘಟ್ಟದಲ್ಲಿನ ರೇಷ್ಮೆ ಗೂಡು ಮಾರುಕಟ್ಟೆಗೆ ಭೇಟಿ ನೀಡಿ ಸಮಸ್ಯೆಗಳಿದ್ದರೆ ಪರಿಶೀಲಿಸುವ ಉದ್ದೇಶದಿಂದ ಭೇಟಿ ನೀಡಿದ್ದೇನೆ ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಜೆ.ಮಂಜುನಾಥ್ ಹೇಳಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಗುರುವಾರ ಭೇಟಿ ನೀಡಿ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡು ವಹಿವಾಟು ಹೇಗೆ ನಡೆಯುತ್ತದೆ ಎಂಬುದನ್ನು ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.
ದೇಶದಲ್ಲೇ ಅತಿ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆ ಶಿಡ್ಲಘಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸರಾಸರಿ ದಿನಕ್ಕೆ ೪೦ ಸಾವಿರ ಕೆಜಿ ರೇಷ್ಮೆ ಗೂಡು ವಹಿವಾಟು ನಡೆಯುತ್ತದೆ. ಈ ಹಿಂದೆ ರೇಷ್ಮೆ ಗೂಡನ್ನು ಬಹಿರಂಗ ಹರಾಜಿನ ಮೂಲಕ ರೀಲರುಗಳು ಕೊಂಡು ಕೌಂಟರಿನಲ್ಲಿ ಹಣ ಕಟ್ಟಿ ನಂತರ ಒಯ್ಯುತ್ತಿದ್ದರು. ಆದರೆ ಇದೀಗ ಮಾರುಕಟ್ಟೆಯಲ್ಲಿ ಇ ಹರಾಜು ಪ್ರಕ್ರಿಯೆ ಶುರುವಾಗಿದ್ದು ರೈತರು ಹಾಗು ರೀಲರ್‌ಗಳು ಇ ಹರಾಜು ಪದ್ದತಿಯ ಮೂಲಕ ವಹಿವಾಟು ನಡೆಸುವುದನ್ನು ಕಂಡು ಸಂತಸ ವ್ಯಕ್ತಪಡಿಸಿದರು.
ಮಾರುಕಟ್ಟೆ ಸಹಾಯಕ ನಿರ್ದೇಶಕ ರತ್ನಯ್ಯಶೆಟ್ಟಿ ನಗರದ ಮಾರುಕಟ್ಟೆಯ ಸಂಪೂರ್ಣ ವಹಿವಾಟಿನ ಚಿತ್ರಣವನ್ನು ವಿವರಿಸಿ ರಾಜ್ಯ ಹಾಗೂ ನೆರೆ ರಾಜ್ಯದ ರೈತರು ಇಲ್ಲಿನ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವುದೆಂಬ ಆಶಾಭಾವನೆಯಿಂದ ಇಲ್ಲಿಗೆ ಬರುತ್ತಾರೆ. ಚಾಕಿ, ಹುಳುಮನೆ, ಹಿಪ್ಪುನೇರಳೆ ಬೇಸಾಯ, ರೇಷ್ಮೆ ನೂಲು ಬಿಚ್ಚಾಣಿಕೆ ಘಟಕ, ಹುರಿ ನೂಲು ತಯಾರಿಕಾ ಘಟಕ ಮುಂತಾದವುಗಳನ್ನು ನಡೆಸುತ್ತಾ ನೇರವಾಗಿ ಅನೇಕರು ಅವಲಂಬಿತರಾಗಿದ್ದಾರೆ. ಒಂದು ರೀತಿಯಲ್ಲಿ ಇಡೀ ತಾಲ್ಲೂಕಿನ ಆರ್ಥಿಕ ಪರಿಸ್ಥಿತಿ ರೇಷ್ಮೆಯನ್ನು ಅವಲಂಬಿಸಿದೆ ಎಂದು ವಿವರಿಸಿದರು.
ರೇಷ್ಮೆ ಇಲಾಖೆಯ ಉಪನಿರ್ದೇಶಕ ನಾಗಭೂಷಣ್, ರೇಷ್ಮೆ ಸಹಾಯಕ ನಿರ್ದೇಶಕರಾದ ರತ್ನಯ್ಯಶೆಟ್ಟಿ, ಎಂ.ಸಿ.ಚಂದ್ರಪ್ಪ,ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶ್ರೀನಾಥಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -