ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೇಷ್ಮೆ ಕೃಷಿಕರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಅಭಿವೃದ್ಧಿಗೊಳಿಸಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಒತ್ತಾಯಿಸಿದರು.
ರೇಷ್ಮೆ ಗೂಡಿನ ಮಾರುಕಟ್ಟೆಯ ಅರ್ಕಾವತಿ ಗೋಡನ್ನಲ್ಲಿ ತೂಕದ ಸ್ಕೇಲ್ ಇಲ್ಲದಿರುವುದರಿಂದ ರೈತರು ತಮ್ಮ ರೇಷ್ಮೆ ಗೂಡನ್ನು ಬೇರೆ ಗೋಡನ್ಗೆ ತೂಕ ಹಾಕಿಸಲು ಹೋಗುವ ಸಮಯದಲ್ಲಿ ಗೂಡು ಕಳ್ಳತನವಾಗುತ್ತಿದೆ. ಆದ್ದರಿಂದ ಅರ್ಕಾವತಿ ಗೋಡನ್ನಲ್ಲಿ ತೂಕದ ಸ್ಕೇಲ್ ಅಳವಡಿಸಬೇಕು.
ಮಾರುಕಟ್ಟೆಯಲ್ಲಿ ಹಲವು ಬಾರಿ ರೇಷ್ಮೆ ಗೂಡಿನ ಕಳ್ಳರು ಸಿಕ್ಕುಬಿದ್ದು ಪೊಲೀಸರಿಗೆ ಒಪ್ಪಿಸಲಾಗಿದೆ. ಕಳ್ಳತನವನ್ನು ತಪ್ಪಿಸಲು ಮತ್ತು ಕಳ್ಳರನ್ನು ಪತ್ತೆಹಚ್ಚಲು ಮಾರುಕಟ್ಟೆ ಕಾಂಪೌಂಡ್ ಸುತ್ತಲೂ ಸಿ.ಸಿ.ಕ್ಯಾಮೆರಾ ಅಳವಡಿಸಬೇಕು.
ರೇಷ್ಮೆ ಗೂಡಿನ ಮಾರುಕಟ್ಟೆಗೆ ಒಂದೇ ಗೇಟ್ ಇರುವುದು ಸರಿಯಾಗಿದೆ. ಎರಡು ಅಥವಾ ಮೂರು ಗೇಟ್ ಅಳವಡಿಸಿದಲ್ಲಿ ಕಳ್ಳತನಗಳು ಹಾಗೂ ಅಕ್ರಮ ಚಟುವಟಿಕೆಗಳಿಗೆ ದಾರಿಯಾಗುತ್ತದೆ. ರೈತರಿಗೆ ತಂಗಲು ವಿಶ್ರಾಂತಿ ಗೃಹ ಹಾಗೂ ಕ್ಯಾಂಟಿನ್ ವ್ಯವಸ್ಥೆ ಕಲ್ಪಿಸಬೇಕು ಮುಂತಾದ ಬೇಡಿಕೆಗಳಿರುವ ಮನವಿ ಪತ್ರವನ್ನು ರೇಷ್ಮೆ ಗೂಡಿನ ಮಾರುಕಟ್ಟೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ ಅವರಿಗೆ ನೀಡಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಕಾರ್ಯದರ್ಶಿ ಪ್ರತೀಶ್, ಕೋಟೆ ಚನ್ನೇಗೌಡ, ಪುರುಷೋತ್ತಮ್, ಮುರಳಿ, ನಾಗರಾಜ್, ಗೋವಿಂದಪ್ಪ, ಲಕ್ಷ್ಮೀಪತಿರೆಡ್ಡಿ, ಬಾಲಮುರಳಿಕೃಷ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.