ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಮಂಗಳವಾರ ಬಜೆಟ್ ಪೂರ್ವ ಸಲಹೆ ಸ್ವೀಕಾರ ಸಭೆಯನ್ನು ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆಯ ವತಿಯಿಂದ ಆಯೋಜಿಸಲಾಗಿತ್ತು.
ರೇಷ್ಮೆ ಬೆಳೆಗಾರರು, ಚಾಕಿ ಸಾಕಾಣಿಕೆದಾರರು, ರೇಷ್ಮೆ ನೂಲು ಬಿಚ್ಚಾಣಿಕೆದಾರರು, ಮೊಟ್ಟೆ ತಯಾರಕರು ಸೇರಿದ ಸಭೆಯಲ್ಲಿ ರೇಷ್ಮೆ ಉದ್ಯಮದಲ್ಲಿ ತೊಡಗಿರುವವರಿಗೆ ಪೂರಕವಾಗಿ ಸರ್ಕಾರದ ಬಜೆಟ್ ಜುಲೈ 10 ರಂದು ಮೂಡಿಬರಲು ಸಲಹೆ ಸೂಚನೆಗಳನ್ನು ನೀಡಲಾಯಿತು. ಮುಂಬರುವ ಬಜೆಟ್‌ನಲ್ಲಿ ರೇಷ್ಮೆಕೃಷಿ ಅಭಿವೃದ್ಧಿಗೆ ವಿಶೇಷ ಸೌಲಭ್ಯವನ್ನು ನೀಡುವ ವಿಚಾರ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸರ್ಕಾರವು ಮಂಡಿಸುವ ಆಯವ್ಯಯದಲ್ಲಿ ರೇಷ್ಮೆ ಕೃಷಿಕರ ಪರವಾಗಿ ಅಭಿವೃದ್ಧಿಪೂರಕ ಕ್ರಮಗಳನ್ನು ಕೈಗೊಳ್ಳಲು ವಿಶೇಷ ಯೋಜನೆಯನ್ನು ರೂಪಿಸಿ ಸಂಕಷ್ಟದಲ್ಲಿರುವ ರೇಷ್ಮೆ ಕೃಷಿಕರನ್ನು ಉಳಿಸಲು ಸೂಕ್ತ ಕ್ರಮಗಳನ್ನು ಕೈಗೆತ್ತಿಕೊಂಡು ಹೆಚ್ಚಿನ ಅನುದಾನವನ್ನು ಮೀಸಲಿಡಬೇಕು. ನೂಲು ಬಿಚ್ಚಾಣಿಕೆದಾರರು ಖಾಸಗಿ ವರ್ತಕರಿಂದ ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲು ಮತ್ತು ರೇಷ್ಮೆಗೂಡಿನ ದರದಲ್ಲಿ ಸ್ಥಿರತೆಯನ್ನು ಕಾಪಾಡಲು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ (KSMB)ಗೆ ಕೂಡಲೇ 50 ಕೋಟಿ ಹಣವನ್ನು ಬಿಡುಗಡೆ ಮಾಡಿ, ಆ ಸಂಸ್ಥೆಯನ್ನು ಪುನಃಶ್ಚೇತನಗೊಳಿಸುವುದು. ರೇಷ್ಮೆಹುಳು ಸಾಕಾಣಿಕೆ ಮನೆಗೆ ನೀಡುತ್ತಿದ್ದ ಸಹಾಯ ಧನವನ್ನು ಕಡಿತಗೊಳಿಸಿದ್ದು, ಈ ಹಿಂದಿನಂತೆ ಮುಂದುವರೆಸುವುದು.
ಹನಿನೀರಾವರಿಗೆ ಕೊಡುತ್ತಿದ್ದ ಸಹಾಯ ಧನದ ಸೌಲಭ್ಯವನ್ನು ಕಡಿತಗೊಳಿಸಿದ್ದು, ಯಥಾಸ್ಥಿತಿ ಮುಂದುವರೆಸುವುದು. 2003-–04ನೇ ಸಾಲಿನ ಬಜೆಟ್‌ನಲ್ಲಿ ಮಿಶ್ರತಳಿ ಗೂಡಿಗೆ ಪ್ರೋತ್ಸಾಹ ಧನವಾಗಿ ಕೊಡಲು ತೀರ್ಮಾನಿಸಿದ್ದ ೩೦ ರೂ. ಗಳನ್ನು ಇದುವರೆವಿಗೂ ಅನುಷ್ಠಾನಗೊಳಿಸಿಲ್ಲವಾದ್ದರಿಂದ ವಿತರಣೆಗೆ ಕೂಡಲೇ ಕ್ರಮ ಕೈಗೊಳ್ಳುವುದು. ಹಿಂದಿನ ಬಜೆಟ್‌ನಲ್ಲಿ ಘೋಷಣೆ ಮಾಡಿರುವ 20 ಶೀತಲ ಗೃಹ ನಿರ್ಮಾಣವನ್ನು ಇದುವರೆವಿಗೂ ಅನುಷ್ಠಾನಗೊಳಿಸಿಲ್ಲವಾಗಿದ್ದು, ಈ ಕೂಡಲೇ ಅನುಷ್ಠಾನಗೊಳಿಸತಕ್ಕದ್ದು. ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಕಳೆದ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವ ೧ ಲಕ್ಷ ರೂ.ಗಳ ಕಡಿಮೆ ಬಡ್ಡಿಯ ಸಾಲ ಯೋಜನೆಯು ಇದುವರೆವಿಗೂ ಜಾರಿಯಾಗಿಲ್ಲವಾದ್ದರಿಂದ ನೂಲು ಬಿಚ್ಚಾಣಿಕೆದಾರರನ್ನು ಉಳಿಸಲು ಕೂಡಲೇ ಅನುಷ್ಠಾನಗೊಳಿಸುವುದು. ರೇಷ್ಮೆಗೂಡು ಮಾರುಕಟ್ಟೆಗಳ ಅಭಿವೃದ್ಧಿಗೆ ಪೂರಕ ಕ್ರಮಗಳನ್ನು ಕೈಗೊಂಡು ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡುವುದು. ಸಣ್ಣ-ಸಣ್ಣ ನೂಲು ಬಿಚ್ಚಾಣಿಕೆದಾರರಿಗೆ ಅನುಕೂಲವಾಗುವಂತೆ 2 ಬೇಸಿನ್‌ಗಳ ಸಣ್ಣ ನೂಲು ಬಿಚ್ಚಾಣಿಕೆ ಘಟಕಗಳನ್ನು ಅಳವಡಿಸಿಕೊಳ್ಳಲು ಸಹಾಯಧನ ಒದಗಿಸುವುದು. ರೇಷ್ಮೆ ಕೃಷಿಗೆ ಸೌಲಭ್ಯ ನೀಡುವಿಕೆಯಲ್ಲಿನ ಜಾತಿ ಆಧಾರಿತ ಸಹಾಯಧನ ವಿತರಣೆಯ ನೀತಿಯನ್ನು ಕೈಬಿಟ್ಟು, ರೇಷ್ಮೆ ಕೃಷಿಕರನ್ನು ಒಂದೇ ಎಂದು ಪರಿಗಣಿಸಿ ಸೌಲಭ್ಯ ವಿತರಿಸುವುದು. ಬಯಲುಸೀಮೆ ಭಾಗದ ಜಿಲ್ಲೆಗಳಲ್ಲಿ ಕೊಳವೆ ಬಾವಿಗಳಿಂದ ಅತಿ ಕಡಿಮೆ ನೀರು ಲಭ್ಯವಿರುವುದರಿಂದ, ನೀರನ್ನು ಶೇಖರಿಸಿ ತೋಟಗಳಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ನೀರಿನ ತೊಟ್ಟಿಗಳಿಗೆ ಸಹಾಯ ಧನ ನೀಡುವುದು. ರೇಷ್ಮೆ ಮೇಲಿನ ಆಮದು ಸುಂಕವನ್ನು ಶೇಕಡಾ 15 ರಿಂದ ಈ ಹಿಂದಿನಂತೆ 31.5ಕ್ಕೆ ಏರಿಸಲು ಕೇಂದ್ರ ಸರ್ಕಾರಕ್ಕೆ ಕೂಡಲೇ ಪತ್ರ ಬರೆದು, ರೇಷ್ಮೆ ಕೃಷಿಯನ್ನು ಉಳಿಸಲು ಕ್ರಮ ಕೈಗೊಳ್ಳುವುದು ಎಂಬ ವಿಷಯಗಳನ್ನು ಬಜೆಟ್‌ನಲ್ಲಿ ಸೇರಿಸಲು ರೈತರು ಚರ್ಚಿಸಿದರು. ತಮ್ಮ ಬೇಡಿಕೆಗಳ ಪಟ್ಟಿಯನ್ನು ರೇಷ್ಮೆಕೃಷಿ ಅಭಿವೃದ್ಧಿ ಆಯುಕ್ತರು ಮತ್ತು ಉಪನಿರ್ದೇಶಕರ ಮೂಲಕ ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡಲು ಸಭೆಯಲ್ಲಿ ಒಮ್ಮತವಾಗಿ ತೀರ್ಮಾನಿಸಲಾಯಿತು.
ರೈತ ಮುಖಂಡರಾದ ಎಸ್.ಎಂ.ನಾರಾಯಣಸ್ವಾಮಿ, ಭಕ್ತರಹಳ್ಳಿ ಬೈರೇಗೌಡ, ಯಲುವಳ್ಳಿ ಸೊಣ್ಣೇಗೌಡ, ಮಳ್ಳೂರು ಹರೀಶ್, ಕೆಂಪರೆಡ್ಡಿ, ಶ್ರೀರಾಮಣ್ಣ, ರೀಲರುಗಳಾದ ಅನ್ವರ್, ರಾಮಕೃಷ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.