ಅಂತರಾಷ್ಟ್ರೀಯ ಮಟ್ಟದಲ್ಲಿ ರೇಷ್ಮೆಯ ಖ್ಯಾತಿಯನ್ನು ಹೆಚ್ಚಿಸಬೇಕಾದರೆ ರೈತರು ದ್ವಿತಳಿ ಗೂಡನ್ನು ಬೆಳೆಯುವಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಸೊಣ್ಣೇನಹಳ್ಳಿ ಗ್ರಾಮದ ರೈತ ರಾಮಚಂದ್ರಾಚಾರ್ ಎಂಬುವವರ ತೋಟದಲ್ಲಿ ಜಿಲ್ಲಾ ಪಂಚಾಯತಿ ವತಿಯಿಂದ ಶನಿವಾರ ಆಯೋಜನೆ ಮಾಡಲಾಗಿದ್ದ ದ್ವಿತಳಿ ರೇಷ್ಮೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಗುಣಮಟ್ಟದ ರೇಷ್ಮೆಯನ್ನು ಬೆಳೆಯುವಲ್ಲಿ ಹೆಚ್ಚು ಪ್ರಸಿದ್ಧಿಯಾಗಿರುವ ಈ ಭಾಗದ ರೈತರು ನೀರಿನ ಅಭಾವದಿಂದಾಗಿ ಬೆಳೆ ಬೆಳೆಯಲು ಕಷ್ಟಕರವಾದ ಪರಿಸ್ಥಿತಿಯಲ್ಲಿಯೂ ದ್ವಿತಳಿ ಗೂಡು ಬೆಳೆಯಲು ಮುಂದಾಗುತ್ತಿರುವುದು ಸಂತಸದ ವಿಚಾರವೆಂದರು.
ರೇಷ್ಮೆ ಸಹಾಯಕ ನಿರ್ದೇಶಕ ವೃಷಬೇಂದ್ರ ಮಾತನಾಡಿ, ತೋಟಗಳಿಗೆ ಬೇವಿನಹಿಂಡಿ, ಹೊಂಗೆಹಿಂಡಿಯನ್ನು ಕೊಡುವುದು ಸೂಕ್ತ. ಕಳಪೆ ಗುಣಮಟ್ಟದ ರಸಗೊಬ್ಬರಗಳನ್ನು ನೀಡುವುದು, ರಾಸಾಯನಿಕಗಳನ್ನು ಸಿಂಪಡಣೆ ಮಾಡಬಾರದು. ತೋಟಗಳಿಗೆ ಕೊಡುವಂತಹ ಕೊಟ್ಟಿಗೆ ಗೊಬ್ಬರ, ರಾಸಾಯನಿಕ ಗೊಬ್ಬರಗಳ ಬಗ್ಗೆ ಸೂಕ್ತ ಗಮನಹರಿಸಬೇಕು, ಹುಳುಗಳು ಹಣ್ಣಾದಾಗ ಚಂದ್ರಿಕೆಗಳಿಗೆ ಸೊಂಕು ನಿವಾರಕ ಔಷಧಿಯನ್ನು ಸಿಂಪಡಣೆ ಮಾಡಬೇಕು ಎಂದರು. ದ್ವಿತಳಿ ಗೂಡಿನ ವಿವಿಧ ಹಂತಗಳ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಗಿದ್ದು, ರೈತರು ಮತ್ತು ಅಧಿಕಾರಿಗಳು ವೀಕ್ಷಿಸಿದರು.
ರೈತ ರಾಮಚಂದ್ರಾಚಾರ್, ಮೈಸೂರಿನ ಸಿ.ಎಸ್.ಆರ್. ಮತ್ತು ಟಿ.ಐ. ಸಂಸ್ಥೆಯ ನಿರ್ದೇಶಕ ಡಾ.ಶಿವಪ್ರಸಾದ್, ವಿಜ್ಞಾನಿ ಡಾ.ಪಣಿರಾಜ್, ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ರೇಷ್ಮೆ ಹಿತರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕ ಯಲುವಹಳ್ಳಿ ಸೊಣ್ಣೇಗೌಡ, ಹಸಿರುಸೇನೆಯ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಮಳ್ಳೂರು ಶಿವಣ್ಣ, ರೇಷ್ಮೆ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ಬಾಗೇಪಲ್ಲಿ ರೇಷ್ಮೆ ಸಹಾಯಕ ನಿರ್ದೆಶಕ ಅಮರ್ನಾಥ್. ಕೃಷಿ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ಕುಮಾರ್, ಬಸವರಾಜ್, ರಾಮ್ಕುಮಾರ್, ನಿರಂಜನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.