ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಪ್ರಾರಂಭವಾಗಿರುವ ಇ–ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ, ಕೆಲವು ಮಂದಿ ಮಾರುಕಟ್ಟೆಯ ಮುಂಭಾಗದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಇ–ಹರಾಜು ಪ್ರಾರಂಭ ಮಾಡಿರುವುದರಿಂದ ರೀಲರುಗಳು ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ, ಹಳೆಯ ಪದ್ಧತಿಯಲ್ಲಿ ಹರಾಜು ನಡೆಯುತ್ತಿದ್ದಾಗ, ಬೆಳಿಗ್ಗೆ ೧೨ ಗಂಟೆಗೆ ಹರಾಜು ಮುಗಿಸಿಕೊಂಡು, ರೈತರಿಗೆ ಕೊಡಬೇಕಾದಂತಹ ಹಣವನ್ನು ಪಾವತಿ ಮಾಡಿ, ನೂಲು ಬಿಚ್ಚಾಣಿಕೆ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದೇವು. ಆದರೆ ಮಾರುಕಟ್ಟೆಯಲ್ಲಿ ಈಗ ಮೂರು ಬಾರಿ ಹರಾಜು ಮಾಡುತ್ತಿರುವುದರಿಂದ ರೀಲರುಗಳಿಗೆ ಕಷ್ಟವಾಗುತ್ತಿದೆ, ಕೆಲವು ಮಂದಿ ಅನಕ್ಷರಸ್ಥ ರೀಲರುಗಳು ಇ–ಹರಾಜಿನಲ್ಲಿ ಮೊಬೈಲ್‌ಗಳ ಮೂಲಕ ಬಿಡ್ ನೀಡಲು ಸಾಧ್ಯವಾಗುತ್ತಿಲ್ಲ, ರೈತರಿಗೂ ತೊಂದರೆಯಾಗುತ್ತಿದೆ, ರಾಮನಗರ, ಕೊಳ್ಳೆಗಾಲಗಳಲ್ಲಿ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ಸಮಜಾಯಿಶಿ ನೀಡುತ್ತಿದ್ದಾರೆ, ಆದರೆ ಅವು ಚಿಕ್ಕ ಮಾರುಕಟ್ಟೆಗಳು, ಇಲ್ಲಿ ಈ ರೀತಿಯ ವ್ಯವಸ್ಥೆಯಿಂದ ಯಶಸ್ಸು ಸಾಧ್ಯವಾಗುವುದಿಲ್ಲ, ಹರಾಜು ಪ್ರಾರಂಭ ಮಾಡುವ ಮುಂಚೆ ಯಾವುದೇ ರೀಲರುಗಳನ್ನು ಕರೆದುಕೊಂಡು ಈ ಬಗ್ಗೆ ಮಾಹಿತಿ ನೀಡಿಲ್ಲವೆಂದು ಅವರು ಆರೋಪಿಸಿದರು.
ಕೆಲ ಮಂದಿ ಮಾರುಕಟ್ಟೆಯ ಹೊರಗೆ ಇ–ಹರಾಜು ಬೇಡವೆಂದು ಘೋಷಣೆ ಕೂಗುತ್ತಿರುವಾಗ ಮಾರುಕಟ್ಟೆಯ ಒಳಗೆ ಇ–ಹರಾಜಿನ ಪದ್ಧತಿಯಲ್ಲಿಯೇ ಹರಾಜು ಪ್ರಕ್ರಿಯೇ ಯಾವುದೇ ಗೊಂದಲವಿಲ್ಲದೆ ನಡೆದಿತ್ತು. ರೀಲರುಗಳು ಗೂಡು ಕೊಳ್ಳುವುದು ನಿರಾತಂಕವಾಗಿ ಸಾಗಿತ್ತು.
ಸ್ಥಳಕ್ಕೆ ಬೇಟಿ ನೀಡಿದ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಟಿ.ಸಿ. ವೆಂಕಟೇಶ್, ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದವರೊಂದಿಗೆ ಸಮಾಲೋಚನೆ ನಡೆಸಿದರು. ನಿಮಗೆ ತೊಂದರೆಯಾಗಿದ್ದರೆ, ಸಂಬಂಧಪಟ್ಟ ಇಲಾಖೆಯ ಆಯುಕ್ತರಿಗೆ ದೂರು ಕೊಟ್ಟು ಸಮಸ್ಯೆ ಬಗೆಹರಿಸಿಕೊಳ್ಳಿ, ಇಲ್ಲವೇ, ಪ್ರತಿಭಟನೆಯ ಮೂಲಕ ಸಮಸ್ಯೆಯನ್ನು ಇತ್ಯರ್ಥ ಪಡಿಸಿಕೊಳ್ಳುವುದಿದ್ದರೆ, ಒಂದು ದಿನವನ್ನು ನಿಗದಿಪಡಿಸಿ, ಪೊಲೀಸ್ ಇಲಾಖೆಗೂ ಮಾಹಿತಿಯನ್ನು ನೀಡಿದರೆ, ಸೂಕ್ತ ಬಂದೋ ಬಸ್ತ್ ಮಾಡಿ, ರಕ್ಷಣೆ ನೀಡಬೇಕಾಗುತ್ತದೆ. ಈ ರೀತಿ ಏಕಾಏಕಿಯಾಗಿ ಪ್ರತಿಭಟನೆಗೆ ಅವಕಾಶವಿಲ್ಲವೆಂದು ತಿಳಿಸಿದ ನಂತರ ಪ್ರತಿಭಟನೆ ಕೈಬಿಟ್ಟು, ಉಪನಿರ್ದೇಶಕರೊಂದಿಗೆ ಚರ್ಚೆ ನಡೆಸಲು ಪ್ರತಿಭಟನಾಕಾರರು ಮುಂದಾದರು.
ಇದೇ ವೇಳೆ ರೀಲರ್ ರಾಮಕೃಷ್ಣಪ್ಪ ಮಾತನಾಡಿ, ಇ–ಹರಾಜು ಪ್ರಾರಂಭ ಮಾಡುವ ಮುನ್ನ ರೇಷ್ಮೆ ಇಲಾಖೆಯ ಆಯುಕ್ತರು ರೈತರು ಹಾಗೂ ರೀಲರುಗಳನ್ನು ಸಭೆ ಕರೆದು ಇದರ ಬಗ್ಗೆ ಚರ್ಚೆ ಮಾಡಿದಾಗ ಯಾರೊಬ್ಬರೂ ವಿರೋಧ ವ್ಯಕ್ತಪಡಿಸಲಿಲ್ಲ. ಪ್ರಾರಂಭವಾಗಿ, ತಾಂತ್ರಿಕ ದೋಷಗಳು ಕಂಡು ಬಂದು, ಸ್ಥಗಿತಗೊಳಿಸಿದ್ದಾಗಲೂ ಯಾರೂ ವಿರೋಧ ವ್ಯಕ್ತಪಡಿಸಲಿಲ್ಲ. ಜಿಲ್ಲಾಧಿಕಾರಿಗಳು ಮತ್ತು ಶಾಸಕರು ಭೇಟಿ ನೀಡಿದಾಗಲೂ ಯಾರೂ ಚಕಾರವೆತ್ತಲಿಲ್ಲ. ಬದಲಿಗೆ ಇದರಿಂದ ಅನೇಕ ಉಪಯೋಗಗಳಿವೆ ಎಂದೇ ಹೇಳಿದರು. ಈಗ ಎರಡನೇ ಬಾರಿಗೆ ಪ್ರಾರಂಭವಾದ ನಂತರ ಕೆಲವರು ಎಚ್ಚೆತ್ತುಕೊಂಡಿದ್ದಾರೆ. ಪ್ರಾರಂಭ ಮಾಡಿರುವುದನ್ನು ಹಂತ ಹಂತವಾಗಿ ಉನ್ನತೀಕರಣ ಮಾಡಲು ಎಲ್ಲರೂ ಸಹಕಾರ ನೀಡಿ. ನಮಗೆ ಸಿಗಬೇಕಾದಂತಹ ಸೌಲಭ್ಯಗಳಿಗಾಗಿ ಸರ್ಕಾರದೊಂದಿಗೆ ಹೋರಾಟ ಮಾಡೊಣ. ಕೆಲವು ಮಂದಿ ಸ್ವಯಂ ಘೋಷಿತವಾಗಿ ರೀಲರ್‌ಗಳ ಸಂಘದ ಅಧ್ಯಕ್ಷರಾಗಿದ್ದಾರೆ, ಅವರಿಗೆ ತೋಚಿದಂತೆ ಮಾಡಿಕೊಳ್ಳಲಿ, ನಾವು ಸಂಘಟಿತರಾಗಿ ಹೋರಾಟ ಮಾಡೋಣವೆಂದರು.
- Advertisement -
- Advertisement -
- Advertisement -