ಶಿಡ್ಲಘಟ್ಟದ ಕುಕ್ಕಲಚಿನ್ನಪೇಟೆಯಲ್ಲಿ ನೆಲೆಸಿರುವ ರೇಣುಕಾ ಎಲ್ಲಮ್ಮ ದೇವಿಯ ಹಸಿ ಕರಗ ಮಹೋತ್ಸವವನ್ನು ಸೋಮವಾರ ರಾತ್ರಿ ವಿಜೃಂಭಣೆಯಿಂದ ಆಚರಿಸಲಾಯಿತು.
ಕರಗ ಮಹೋತ್ಸವವು ಯುಗಾದಿಯ ದಿನದಂದು ಧ್ವಜಾರೋಹಣದಿಂದ ಆರಂಭವಾಗಿ ಆರುದಿನಗಳ ಕಾಲ ಅನೇಕ ಪೂಜಾ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ. ಯುಗಾದಿಯ ದಿನ ರಾತ್ರಿ ನಡೆಯುವ ಹಸಿಕರಗದ ರಚನೆ ಬಹು ಕಟ್ಟುನಿಟ್ಟಾದ ಹಾಗೂ ಸಂಪ್ರದಾಯಬದ್ಧವಾದುದು.
ಪಿ.ಎಂ.ರಮೇಶ್ ಅವರು ಈ ಬಾರಿ ಕರಗವನ್ನು ಹೊರುತ್ತಿದ್ದು, ಸಂಜೆಯ ಸುಮಾರಿಗೆ ಕರಗ ಹೊತ್ತು ನಡೆಯುವ ಅವರಿಗೆ ವಪನ ಸಂಸ್ಕಾರ ಮಾಡಿ, ಕಂಕಣ ಕಟ್ಟಿ, ಕೈತುಂಬ ಕರಿ ಬಳೆ ತೊಡಿಸಿ, ಅಚ್ಚ ಮಲ್ಲಿಗೆಯ ಜಡೆಕುಚ್ಚುಗಳಿಂದ ಸಿಂಗರಿಸಿ, ಅರಿಶಿನದ ಸೀರೆ, ಕುಪ್ಪುಸ ಉಡಿಸಿ, ಆಭರಣಗಳಿಂದ ಅಲಂಕರಿಸಿದ್ದರು. ಅನಂತರ ಶಕ್ತಿಸ್ವರೂಪನಾದ ಅವರನ್ನು ಧೂಪ ದೀಪಗಳಿಂದ ಮಂಗಳವಾದ್ಯಗಳೊಂದಿಗೆ ಶಾಸ್ತ್ರೋಕ್ತವಾದ ಪೂಜೆ ನಡೆಸಿ, ಕೈಯಲ್ಲಿ ಕತ್ತಿ ಹಿಡಿದ ಅಂಗರಕ್ಷಕರ ತಂಡದ ವೀರಕುಮಾರರ ಕಾವಲಿನಲ್ಲಿ ದೇವಸ್ಥಾನಕ್ಕೆ ಕರೆತಂದರು.
ಕರಗವನ್ನು ಹೊತ್ತಮೇಲೆ ಮತ್ತೊಮ್ಮೆ ವಿಶೇಷ ಮಂಗಳಾರತಿಯಾದ ನಂತರ ಸ್ತುತಿಪದ್ಯಗಳನ್ನು ಹೇಳುವ ಪೂಜಾರಿ ಹಾಗೂ ವೀರಕುಮಾರರ ರಕ್ಷಣೆಯಲ್ಲಿ ಗುಡಿಯ ಅಂಗಳ ಬಿಟ್ಟ ಕರಗ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೆಳಗಿನ ಜಾವಕ್ಕೆ ಮತ್ತೆ ಗರ್ಭಗುಡಿ ಪ್ರವೇಶಿಸಿದರು.
ಕರಗವನ್ನು ಸ್ವಾಗತಿಸಲು ಬಹುತೇಕರು ಮನೆಗಳ ಮುಂದೆ ರಂಗವಲ್ಲಿಯನ್ನು ಇಟ್ಟಿದ್ದು, ಕರಗ ಬಂದ ಮೇಲೆ ಆರತಿ ಬೆಳಗಿ ಪೂಜಿಸಿ ಮಲ್ಲಿಗೆ ಹೂಗಳನ್ನು ಅರ್ಪಿಸಿದರು.
- Advertisement -
- Advertisement -
- Advertisement -
- Advertisement -