ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಪ್ರಾರಂಭಿಸಿದ್ದ ಇ–ಹರಾಜು ಪದ್ಧತಿಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಸೋಮವಾರ ನೂಲು ಬಿಚ್ಚಾಣಿಕೆದಾರರು(ರೀಲರುಗಳು) ರೇಷ್ಮೆ ಗೂಡನ್ನು ಖರೀದಿಸದೆ ಮಾರುಕಟ್ಟೆಯ ಹೊರಗೆ ಧರಣಿ ಕುಳಿತರು. ರೇಷ್ಮೆ ಗೂಡನ್ನು ಮಾರಲು ತಂದಿದ್ದ ರೈತರ ಮನವೊಲಿಸಿದ ಅಧಿಕಾರಿಗಳು ವಿಜಯಪುರ, ಎಚ್.ಕ್ರಾಸ್, ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿಯ ರೇಷ್ಮೆ ಗೂಡಿನ ಮಾರುಕಟ್ಟೆಗೆ ಕಳುಹಿಸಿಕೊಟ್ಟರು.
ಇ-–ಹರಾಜು ಪದ್ದತಿಯಲ್ಲಿ ನಮ್ಮ ನಿರೀಕ್ಷೆಗೆ ತಕ್ಕಷ್ಟು ಗೂಡುಗಳನ್ನು ಖರೀದಿ ಮಾಡಲು ಸಾದ್ಯವಾಗುತ್ತಿಲ್ಲ. ಕೆಲವೊಮ್ಮೆ ನಾವು ಎಷ್ಟು ಲಾಟುಗಳಿಗೆ ಬಿಡ್ ಮಾಡುತ್ತೇವೊ ಅಷ್ಟು ಲಾಟುಗಳು ನಮಗೆ ಸಿಗುತ್ತವೆ. ಕೆಲವೊಮ್ಮೆ ಒಂದು ಲಾಟು ಸಹ ಸಿಗುವುದಿಲ್ಲ. ಗೂಡು ಹೆಚ್ಚಾಗಿ ಸಿಕ್ಕಾಗ ಹಣಕಾಸಿನ ತೊಡಕು ಉಂಟಾಗುತ್ತದೆ. ಸಿಗದಿದ್ದಾಗ ನಾವು ತಂದ ಹಣ ಹಾಗೆ ವಾಪಸ್ ತೆಗೆದುಕೊಂಡು ಹೋಗಬೇಕಾಗುತ್ತದೆ.
ನಗರದ ಶೇ. ೮೦ ರಷ್ಟು ಜನರು ಇದೇ ಉದ್ಯಮವನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದು ನಮಗೆ ಕಾರ್ಮಿಕರು ಸಿಗದೇ ಕುಟುಂಬದವರೆಲ್ಲರೂ ಇದೇ ಕಸುಬಿನಲ್ಲಿ ತೊಡಗಿಸಿಕೊಂಡಿದ್ದೇವೆ. ಸುಮಾರು ೪೦ ವರ್ಷಗಳಿಂದ ಗೂಡು ಖರೀದಿ ಮಾಡಿಕೊಂಡು ಬರುತ್ತಿರುವ ರೀಲರುಗಳಲ್ಲಿ ಅವಿದ್ಯಾವಂತರೇ ಹೆಚ್ಚಾಗಿದ್ದೇವೆ. ಮೊಬೈಲ್ಗಳ ಮೂಲಕ ಹರಾಜು ಬಿಡ್ ಮಾಡಲು ಬರುವುದಿಲ್ಲ. ಇದರಿಂದ ಶಾಲಾ ಕಾಲೇಜುಗಳಿಗೆ ಹೋಗುವಂತಹ ಮಕ್ಕಳನ್ನು ಕರೆದುಕೊಂಡು ಬಂದು ಹರಾಜಿನಲ್ಲಿ ಭಾಗವಹಿಸಬೇಕು ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ರೀಲರುಗಳು ದೂರಿದರು.
ಮಾರುಕಟ್ಟೆಯಲ್ಲಿ ತುಂಬಾ ತಡವಾಗುವುದರಿಂದ ಗುಣಮಟ್ಟದ ನೂಲು ಬಿಚ್ಚಾಣಿಕೆ ಆಗುತ್ತಿಲ್ಲ. ರೇಷ್ಮೆಯ ನೂಲನ್ನು ೨ ಸಾವಿರ ರೂಪಾಯಿಗಳಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗಿದೆ. ನಾವು ವ್ಯಾಪಾರಸ್ಥರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ದೊಡ್ಡ ರೀಲರುಗಳು ಉಳಿಯಬಹುದು, ಸಣ್ಣ ಮತ್ತು ಮಧ್ಯಮ ವರ್ಗದ ರೀಲರುಗಳು ಉಳಿಯುವುದು ಕಷ್ಟಕರವಾಗಿದೆ. ಇ-–ಹರಾಜು ಪದ್ದತಿಯನ್ನು ರದ್ದುಗೊಳಿಸಿ ಮೊದಲಿನಂತೆ ಹರಾಜು ಕೂಗಲು ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ನಾವು ಹೋರಾಟ ಮುಂದುವರಿಸುತ್ತೇವೆ ಎಂದು ಅವರು ತಿಳಿಸಿದರು.
ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕರಾದ ವೆಂಕಟರಾವ್ ಮತ್ತು ಮೊಮಿನ್ ರೀಲರುಗಳಿಗೆ ಇ–ಹರಾಜು ಪದ್ಧತಿಯ ಲೋಪದೋಷಗಳನ್ನು ಸರಿಪಡಿಸಲಾಗುವುದು. ಹರಾಜು ಕೂಗದೆ ಮುಷ್ಕರ ನಡೆಸಿದರೆ ರೈತರಿಗೆ ತೊಂದರೆಯಾಗುತ್ತದೆ ಎಂದು ರೀಲರುಗಳ ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ರೀಲರುಗಳು ಇ–ಹರಾಜು ನಿಲ್ಲಿಸುವವರೆಗೂ ನಾವು ಗೂಡು ಕೊಳ್ಳುವುದಿಲ್ಲ. ಹಳೆಯ ಪದ್ಧತಿಯಾದ ಬಾಯಿಂದ ಹರಾಜು ಕೂಗುವುದನ್ನು ನಾಳೆಯಿಂದಲೇ ಪ್ರಾರಂಭಿಸಿ, ನಾವು ಗೂಡು ಕೊಳ್ಳುತ್ತೇವೆಂದು ಪಟ್ಟು ಹಿಡಿದರು.
‘ಕೊಳ್ಳೇಗಾಲ ಮತ್ತು ರಾಮನಗರದ ರೇಷ್ಮೆ ಗೂಡಿನ ಮಾರುಕಟ್ಟೆಗಳಲ್ಲಿ ಇ–ಹರಾಜು ಪದ್ಧತಿ ಒಂದು ವರ್ಷದಿಂದ ಜಾರಿಯಲ್ಲಿದ್ದು, ಯಾವುದೇ ಸಮಸ್ಯೆಗಳಿಲ್ಲ. ಈಚೆಗೆ ಜಿಲ್ಲಾಧಿಕಾರಿಗಳೂ ಕೂಡ ರೈತರು ಮತ್ತು ರೀಲರುಗಳ ಸಮಸ್ಯೆಯನ್ನು ಆಲಿಸಿದ್ದಾರೆ. ಈ ದಿನದ ಬೆಳವಣಿಗೆಯನ್ನು ಸರ್ಕಾರಕ್ಕೆ ಮುಟ್ಟಿಸಲಾಗುವುದು. ಇ–ಹರಾಜಿನ ಲೋಪದೋಷಗಳನ್ನು ಸರಿಪಡಿಸಲಾಗುವುದು’ ಎಂದು ಜಂಟಿ ನಿರ್ದೇಶಕ ವೆಂಕಟರಾವ್ ತಿಳಿಸಿದರು.
‘ರೈತರು ಮತ್ತು ರೀಲರುಗಳು ರೇಷ್ಮೆ ಗೂಡಿನ ವ್ಯವಹಾರದಲ್ಲಿ ಎರಡು ಕಣ್ಣುಗಳಿದ್ದಂತೆ. ಯಾರದೇ ಸಮಸ್ಯೆಯಿದ್ದರೂ ಮತ್ತೊಬ್ಬರು ಸ್ಪಂದಿಸಬೇಕು. ಅಧಿಕಾರಿಗಳೂ ಸಹ ಇಬ್ಬರನ್ನೂ ಸಮಾನವಾಗಿ ಕಾಣಬೇಕು. ದೊಡ್ಡ ರೈತರು ಹಾಗೂ ದೊಡ್ಡ ಮಟ್ಟದ ರೀಲರುಗಳಿಗೆ ತೊಂದರೆಯಾಗದು. ಆದರೆ ಸಣ್ಣ ರೈತರು ಮತ್ತು ಚಿಕ್ಕಮಟ್ಟದಲ್ಲಿ ಗೃಹಕೈಕಾರಿಕೆ ಹೊಂದಿರುವವರೇ ತೊಂದರೆಯನ್ನು ಅನುಭವಿಸುತ್ತಾರೆ. ಅವರಿಗೆ ಅನ್ಯಾಯವಾಗದಂತೆ ಹರಾಜನ್ನು ನಡೆಸಿ’ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್ ತಿಳಿಸಿದರು.
ರೀಲರುಗಳಾದ ಎಸ್.ಸಮೀವುಲ್ಲಾ, ಜಿ.ರಹಮಾನ್, ಎಂ.ರಾಮಕೃಷ್ಣ, ಜೆ.ಜೆ.ಸೀನಪ್ಪ, ಅಕ್ಮಲ್ಪಾಷ, ಎ.ಆರ್.ಅಬ್ದುಲ್ ಅಜೀಜ್, ಬಕ್ಷು, ಅನ್ಸರ್ ಪಾಷ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.