ಸತತ ಬರಗಾಲದಿಂದ ತತ್ತರಿಸುತ್ತಿರುವ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಹಾಲು ಉತ್ಪಾದಕರಿಗೆ ರಿಯಾಯಿತಿ ದರದಲ್ಲಿ ಪಶು ಆಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಒತ್ತಾಯಿಸಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯಿತಿ ಶ್ರೀ ಮಳ್ಳೂರಾಂಭ ದೇವಿಯ ಜಾತ್ರೆ ಮಹೋತ್ಸವದಲ್ಲಿ ಭಾಗವಹಿಸಿದ್ದ ಉತ್ತಮ ರಾಸುಗಳಿಗೆ ಸೋಮವಾರ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಲು ಉತ್ಪಾದಕರಿಗೆ ರಿಯಾಯಿತಿ ದರದಲ್ಲಿ ಪಶು ಆಹಾರ ನೀಡುವ ಆಸ್ವಾಸನೆ ನೀಡಿದರು. ಆದರೆ ಇದುವರೆಗೂ ಯೋಜನೆಯನ್ನು ಅನುಷ್ಠಾನಗೊಳಿಸಿಲ್ಲ. ಅಂತರ್ಜಲದ ಮಟ್ಟ ಕುಸಿದು ಹಾಲು ಉತ್ಪಾದಕರು ಸಂಕಷ್ಟದಲ್ಲಿದ್ದಾರೆ. ಹಾಲು ಉತ್ಪಾದಕರಿಗೆ ಲೀಟರ್ ಹಾಲಿಗೆ ನೀಡುತ್ತಿದ್ದ ಪ್ರೋತ್ಸಾಹಧನವನ್ನು ೪ ರೂಗಳಿಂದ ೫ ರೂಗಳಿಗೆ ಏರಿಕೆ ಮಾಡಿರುವ ಮುಖ್ಯಮಂತ್ರಿಗಳ ನಿರ್ಧಾರ ಸ್ವಾಗತಾರ್ಹ ಎಂದರು.
ಉಚಿತ ಮೇವಿನ ಬೀಜ ಮತ್ತು ಸಹಾಯಧನ: ಜಿಲ್ಲೆಯಲ್ಲಿ ವ್ಯಾಪಕವಾಗಿ ಬರಗಾಲ ಆವರಿಸಿದ ಹಾಲು ಉತ್ಪಾದನೆ ಮಾಡಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಕೋಚಿಮುಲ್ ಮೂಲಕ ಉಚಿತ ಮೇವಿನ ಬೀಜ ಹಾಗೂ ೩ ಸಾವಿರ ರೂಗಳ ಸಹಾಯಧನ ನೀಡಲು ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಲಾಗಿದೆ.
ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ೯.೫ ಲಕ್ಷ ಲೀಟರ್ ಹಾಲು: ಯಾವುದೇ ನದಿನಾಲೆಗಳಿಲ್ಲದ ನೀರಾವರಿ ಸೌಲಭ್ಯಗಳಿಂದ ವಂಚಿತಗೊಂಡಿರುವ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ೯.೫ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಅದನ್ನು ವಿದೇಶಕ್ಕೆ ರಫ್ತು ಮಾಡುತ್ತಿದ್ದೇವೆ. ಜೊತೆಗೆ ಉತ್ಪನ್ನಗಳನ್ನು ತಯಾರಿಸಿ ಅದರಿಂದ ದೊರೆಯುವ ಲಾಭಾಂಶದಲ್ಲಿ ಉತ್ಪಾದಕರಿಗೆ ಅನುಕೂಲ ಕಲ್ಪಿಸಲು ಯೋಜನೆಗಳನ್ನು ರೂಪಿಸಿದ್ದೇವೆ ಎಂದರು.
ಡಿಸಿಸಿ ಬ್ಯಾಂಕಿನಿಂದ ಹಸುಗಳ ಖರೀದಿಗೆ ಸಾಲ: ಜಿಲ್ಲೆಯ ರೈತರ ಆರ್ಥಿಕ ಸ್ಥಿತಿ ಸುಧಾರಣೆ ಮಾಡಲು ವಿಶೇಷ ಕ್ರಮಗಳನ್ನು ಕೈಗೊಂಡಿರುವ ಡಿಸಿಸಿ ಬ್ಯಾಂಕ್ ಮುಂದಿನ ದಿನಗಳಲ್ಲಿ ಹಸುಗಳ ಖರೀದಿಗೆ ೬೦ ಸಾವಿರ ರೂಗಳ ಸಾಲ ನೀಡಲು ಮುಂದಾಗಿದೆ ಇದರಿಂದ ಬಡ ರೈತರಿಗೆ ಅನುಕೂಲವಾಗಲಿದ್ದು ಜೊತೆಗೆ ಸರ್ಕಾರ ಪಶುಭಾಗ್ಯ ಯೋಜನೆಯನ್ನು ಜಾರಿಗೊಳಿಸಲು ಸಿದ್ದತೆ ನಡೆಸಿದ್ದು ಅದು ಸಹ ವರದಾನವಾಗಲಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ ವೆಂಕಟೇಶ್, ಉಪಾಧ್ಯಕ್ಷೆ ದ್ಯಾವಮ್ಮ ಲಿಂಗಪ್ಪ, ಸದಸ್ಯ ಮಳ್ಳೂರಯ್ಯ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆಂಜಿನಪ್ಪ, ಉಪಾಧ್ಯಕ್ಷ ಲಕ್ಷ್ಮಮ್ಮ, ವೆಂಕೋಬರಾವ್, ದೇವರಾಜ್, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ, ಕೋಚಿಮುಲ್ ವಿಸ್ತ್ರಣಾಧಿಕಾರಿ ಮುನೇಗೌಡ, ಡಾ.ರಾಘವೇಂದ್ರ, ಡಾ.ಅರುಣ್‌ಕುಮಾರ್, ಎಂಪಿಸಿಎಸ್ ನಿದೇಶಕರುಗಳಾದ ಬಿಎಲ್ ನಂಜುಂಡಪ್ಪ, ಎನ್.ಲಕ್ಷ್ಮಯ್ಯ, ಕೆ.ಮುನಿರೆಡ್ಡಿ, ತಿಮ್ಮರಾಯಪ್ಪ, ಎನ್.ಬಾಲಕೃಷ್ಣ, ಕಾರ್ಯದರ್ಶಿ ಎಸ್.ಆರ್.ವೆಂಕಟೇಶ್‌ರಾವ್, ವಿ.ಶ್ರೀನಿವಾಸ್, ನಾರಾಯಣಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -