ಗ್ರಾಮೀಣ ಭಾಗದ ಜನ ಜೀವನದ ಸ್ಥಿತಿ ಗತಿ ಅರಿಯಲು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವು ಅನುಕೂಲವಾಗಲಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ, ಹೆಬ್ಬಾಳ ಸಮೀಪದ ಕೆಂಪಾಪುರದ ಪ್ರೆಸಿಡೆನ್ಸಿ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆ(ಎನ್ಎಸ್ಎಸ್)ಯ ಆಶ್ರಯದಲ್ಲಿ ತಾಲ್ಲೂಕಿನ ತಿಪ್ಪೇನಹಳ್ಳಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಎನ್ಎಸ್ಎಸ್ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ದೇಶದ ನಿಜವಾದ ಬದುಕು ಗ್ರಾಮೀಣ ಭಾಗದಿಂದಲೆ ಆರಂಭವಾಗುತ್ತದೆ. ಗ್ರಾಮೀಣ ಭಾಗದ ಅಭಿವೃದ್ಧಿಯ ಆಧಾರದ ಮೇಲೆ ನಗರ ಹಾಗೂ ಇಡೀ ದೇಶದ ಅಭಿವೃದ್ಧಿ ಅವಲಂಬಿತವಾಗಿದೆ. ಹಾಗಾಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನದ ಜತೆಗೆ ಗ್ರಾಮೀಣ ಭಾಗದ ಜನ ಜೀವನ ಕುರಿತು ತಿಳುವಳಿಕೆಯನ್ನು ಅನುಭವದ ಮೂಲಕವೇ ಕಟ್ಟಿಕೊಡಲು ಈ ಎನ್ಎಸ್ಎಸ್ ಶಿಬಿರ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ಎನ್ಎಸ್ಎಸ್ ಶಿಬಿರಾಧಿಕಾರಿ ಪಚಯಪ್ಪನ್ ಶಿಬಿರದ ಕಾರ್ಯಯೋಜನೆಗಳನ್ನು ಕುರಿತು ವಿವರಿಸಿದರು. ಶಿಬಿರದ ಸಂಘಟಕರಾದ ಪ್ರಭುದೇವ್, ಪ್ರಾಧ್ಯಾಪಕರಾದ ಪ್ರೊ.ಪ್ರದೀಪ್ಕುಮಾರ್ ಶಿಂಧೆ, ಪ್ರೊ.ಬಬಿತ ಜೋಸೆಫ್, ಪ್ರೊ.ನಾರಾಯಣಸ್ವಾಮಿ, ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟ(ಕೋಚಿಮುಲ್)ದ ನಿರ್ದೇಶಕ ಬಂಕ್ಮುನಿಯಪ್ಪ, ಕೋಚಿಮುಲ್ನ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಹುಜಗೂರು ರಾಮಯ್ಯ, ಆರ್.ಶ್ರೀನಿವಾಸ್, ಲಕ್ಷ್ಮೀಪತಿರೆಡ್ಡಿ, ಸೂರ್ಯನಾರಾಯಣಗೌಡ, ವಿಶ್ವನಾಥ್, ಸುರೇಂದ್ರಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.