ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮದ ಮಧ್ಯಸ್ತಿಕೆಯಲ್ಲಿ ರೀಲರುಗಳು ರೇಷ್ಮೆಯನ್ನು ಮಾರುವ ಅವಕಾಶವಿದೆ. ಮಗ್ಗಗಳಲ್ಲಿ ಬಳಸುವ ಹತ್ತಿ ಮೊದಲಾದ ಕಚ್ಛಾ ಪದಾರ್ಥಗಳ ಸಾಲಿಗೆ ಈಗ ರೇಷ್ಮೆಯೂ ಸೇರಲಿದ್ದು, ರೇಷ್ಮೆ ನೂಲು ಬಿಚ್ಚಾಣಿಕೆದಾರರು ಅದರ ಪ್ರಯೋಜನವನ್ನು ಪಡೆಯಬೇಕೆಂದು ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮದ ಉಪವ್ಯವಸ್ಥಾಪಕ ಆರ್ಮುಗಮ್ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಮಂಗಳವಾರ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮ ಮತ್ತು ಕೇಂದ್ರ ರೇಷ್ಮೆ ಮಂಡಳಿಯ ಸಹಯೋಗದಲ್ಲಿ ಆಯೋಜಿಸಿದ್ದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮವು ರೀಲರುಗಳು, ಟ್ವಿಸ್ಟರುಗಳು ಮತ್ತು ಮಗ್ಗಹೊಂದಿದವರ ಮಧ್ಯೆ ಕೊಂಡಿಯಂತೆ ಕಾರ್ಯನಿರ್ವಹಿಸಲಿದೆ. ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ರೀಲರುಗಳು ಮತ್ತು ಟ್ವಿಸ್ಟರುಗಳು ವ್ಯವಹಾರ ನಡೆಸಬಹುದು. ರೀಲರುಗಳು ರೇಷ್ಮೆಯ ಗುಣಮಟ್ಟ, ಪ್ರಮಾಣ ಮತ್ತು ಬೆಲೆಯನ್ನು ಟ್ವಿಸ್ಟರೊಡನೆ ಒಪ್ಪಂದ ಮಾಡಿಕೊಂಡು ನಿಗದಿತ ಸಮಯದೊಳಗೆ ಕಳುಹಿಸಬೇಕು. ತಲುಪಿದ ನಂತರ ಟ್ವಿಸ್ಟರು ಸ್ವೀಕರಿಸಿದ್ದನ್ನು ನೋಂದಣಿ ಮಾಡಿದ ಮೇಲೆ ರೇಷ್ಮೆ ಕಳುಹಿಸಿದ ರೀಲರಿನ ಖಾತೆಗೆ ಹಣ ಜಮೆಯಾಗುತ್ತದೆ. ರೇಷ್ಮೆ ಗುಣಮಟ್ಟಕ್ಕೆ ಕೇಂದ್ರ ರೇಷ್ಮೆ ಮಂಡಳಿಯಿಂದ ಪ್ರಮಾಣಪತ್ರ ಪಡೆಯಬೇಕು ಎಂದು ವಿವರಿಸಿದರು.
ಆನ್ಲೈನ್ ವ್ಯವಸ್ಥೆಯಲ್ಲಿ ಜಠಿಲತೆಯು ಕಂಡುಬಂದರೂ ಅದರಿಂದ ಮೂಲ ಉತ್ಪಾದಕರಿಗೆ ನ್ಯಾಯವಾದ ಬೆಲೆ ಮತ್ತು ಲಾಭ ದೊರೆಯಲಿದೆ. ಮಧ್ಯವರ್ತಿ ವ್ಯಾಪಾರಿಗಳಿಂದ ಸೋರಿಹೋಗುವ ಲಾಭ ಉತ್ಪಾದಕರಿಗೆ ನೇರವಾಗಿ ದೊರೆಯಲಿದೆ ಎಂದು ಹೇಳಿದರು.
ರೀಲರ್ ಮಹಮ್ಮದ್ ಅನ್ವರ್ ಮಾತನಾಡಿ, ಕಡಿಮೆ ಬಂಡವಾಳ ಹಾಗೂ ಸಣ್ಣ ಪ್ರಮಾಣದಲ್ಲಿ ರೇಷ್ಮೆ ಉತ್ಪಾದಿಸುವವರೇ ಹೆಚ್ಚಾಗಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆಯನ್ನು ಪೂರೈಕೆ ಮಾಡಲು ಅವರಿಗೆ ಸಾಧ್ಯವಾಗದು. ಸ್ವಸಹಾಯ ಸಂಘಗಳಿಂದ ಉತ್ಪಾದಿಸುವ ಸಾಮಗ್ರಿಗಳಿಗೆ ಆರ್ಥಿಕವಾಗಿ ನಬಾರ್ಡ್ ನೆರವು ಒದಗಿಸುವ ರೀತಿಯಲ್ಲಿ ರೇಷ್ಮೆ ಉತ್ಪಾದಿಸುವವರ ಸಂಘಗಳಿಗೂ ಬೆಂಬಲಿಸಬೇಕು. ಆಗ ಸಾಂಘಿಕವಾಗಿ ಹೆಚ್ಚು ಪ್ರಮಾಣದ ರೇಷ್ಮೆಯನ್ನು ಮಾರಲು ಮತ್ತು ಒಟ್ಟಾಗಿ ಲಾಭ ಹೊಂದಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಬಗ್ಗೆ ಆಯುಕ್ತರ ಕಛೇರಿಯಲ್ಲಿ ಚರ್ಚೆ ನಡೆಸಬೇಕೆಂದು ಅಧಿಕಾರಿಗಳು ಸಲಹೆ ನೀಡಿದರು.
ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿಗಳಾದ ರುದ್ರಣ್ಣಗೌಡ, ಕೆ.ಎನ್. ಮಹೇಶ್, ರೇಷ್ಮೆ ಉಪನಿರ್ದೇಶಕ ಎಂ.ಎನ್. ರತ್ನಯ್ಯಶೆಟ್ಟಿ, ಸಹಾಯಕ ನಿರ್ದೇಶಕ ಎಂ. ನರಸಿಂಹಮೂರ್ತಿ, ವಿಸ್ತರಣಾಧಿಕಾರಿ ರಾಮ್ಕುಮಾರ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -