Home News ರಾಷ್ಟ್ರಪ್ರೇಮ ಮತ್ತು ಸಾಮಾಜಿಕ ಕಳಕಳಿ ಅಗತ್ಯ

ರಾಷ್ಟ್ರಪ್ರೇಮ ಮತ್ತು ಸಾಮಾಜಿಕ ಕಳಕಳಿ ಅಗತ್ಯ

0

ರಾಷ್ಟ್ರಪ್ರೇಮ ಮತ್ತು ಸಾಮಾಜಿಕ ಕಳಕಳಿ ಎರಡನ್ನೂ ಯುವಜನತೆಯಲ್ಲಿ ತುಂಬುವ ಉದ್ದೇಶದಿಂದ ಕ್ರಾಂತಿವೀರ ಚಂದ್ರಶೇಖರ್ ಆಜಾದ್ ಅವರ ನೆನಪಿನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಮಂಜುನಾಥ್ ತಿಳಿಸಿದರು.
ನಗರದ ವೆಂಕಟೇಶ್ವರ ಕಲ್ಯಾಣಮಂಟಪದಲ್ಲಿ ಶನಿವಾರ ಭಾರತೀಯ ಜನತಾ ಪಾರ್ಟಿ ಮತ್ತು ರಾಷ್ಟ್ರೋತ್ಥಾನ ರಕ್ತನಿಧಿಯ ಸಹಯೋಗದಲ್ಲಿ ಕ್ರಾಂತಿವೀರ ಚಂದ್ರಶೇಖರ್ ಆಜಾದ್ ಅವರ ಜನ್ಮದಿನಾಚರಣೆಯ ಅಂಗವಾಗಿ ನಡೆಸಿದ ರಕ್ತದಾನ ಶಿಬಿರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ರಕ್ತದ ಕೊರತೆಯಿಂದಾಗಿ ಅನೇಕ ಮಂದಿ ಸಾವನ್ನಪ್ಪುತ್ತಿದ್ದಾರೆ, ಇಂತಹ ಪರಿಸ್ಥಿತಿಗಳನ್ನು ತಪ್ಪಿಸಲು ಯುವಜನತೆ ಒಟ್ಟುಗೂಡಬೇಕು, ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ಅಂತಹವರ ಪ್ರಾಣಗಳನ್ನು ಉಳಿಸುವುದರ ಜೊತೆಗೆ, ಆರೋಗ್ಯವಂತರಾಗಿ ಜೀವಿಸುವ ಕಡೆಗೆ ಚಿಂತನೆ ನಡೆಸಬೇಕು. ಪ್ರಧಾನ ಮಂತ್ರಿ ನರೇಂದ್ರಮೋದಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಳೆದ ೧೩ ದಿನಗಳಿಂದ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದು, ಜನತೆಯ ಸಂಪೂರ್ಣ ಬೆಂಬಲ ಸಿಗುತ್ತಿದೆ ಎಂದರು.
ಬಿ.ಜೆ.ಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ಮಾತನಾಡಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಪಕ್ಷದಿಂದ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡುತ್ತಿದ್ದು, ತಾಲ್ಲೂಕಿನ ಎಲ್ಲಾ ಭಾಗಗಳಲ್ಲಿ ಯುವಜನತೆಯಿಂದ ಉತ್ತಮವಾದ ಬೆಂಬಲ ವ್ಯಕ್ತವಾಗುತ್ತಿದೆ. ಶಿಬಿರದೊಂದಿಗೆ ಯುವಜನತೆಯಲ್ಲಿ ರಾಷ್ಟ್ರಪ್ರೇಮವನ್ನು ಬೆಳೆಸುವಂತಹ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಮುಂದಿನ ಆಗಸ್ಟ್ ೨೩ ರ ವರೆಗೂ ಖಾದಿಯನ್ನು ಪ್ರಚುರಪಡಿಸುವುದು, ತಿರಂಗಾ ಯಾತ್ರೆ, ಪಂಜಿನ ಮೆರವಣಿಗೆ ಮುಂತಾದ ವಿವಿಧ ಕಾರ್ಯಕ್ರಮಗಳು ಪಕ್ಷದಿಂದ ನಡೆಯಲಿವೆ ಎಂದರು.
ತಾಲ್ಲೂಕಿನ ಚೀಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ತಾಟಪರ್ತಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ೨೦ ಕ್ಕೂ ಹೆಚ್ಚು ಮಂದಿ ಯುವಕರು ಶಿಬಿರದಲ್ಲಿ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಆರ್. ಸುರೇಂದ್ರಗೌಡ, ಜಿಲ್ಲಾ ಕಾರ್ಯದರ್ಶಿ ಶ್ರೀರಾಮರೆಡ್ಡಿ, ಸುರೇಶ್, ಅರಿಕೆರೆ ಮುನಿರಾಜು, ತ್ಯಾಗರಾಜ್, ಸುಜಾತಮ್ಮ, ಮಂಜುಳಮ್ಮ, ಮುನಿರತ್ನಮ್ಮ, ಗಾಯಿತ್ರಮ್ಮ, ಎಬಿವಿಪಿ ನರೇಶ್, ಚಂದ್ರು, ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.