ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ನಲ್ಲರಾಳ್ಳಹಳ್ಳಿ ಬಳಿಯಿರುವ ರಾಮಲಿಂಗೇಶ್ವರ ಬೆಟ್ಟದ ರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವವನ್ನು ಪುಷ್ಯ ಶುಕ್ಲ ಪಕ್ಷ ಪೌರ್ಣಮಿ ಗುರುವಾರದಂದು ವಿಜೃಂಭಣೆಯಿಂದ ಆಚರಿಸಲಾಯಿತು.
ರಾಮ ಮತ್ತು ಈಶ್ವರ ಒಂದೆಡೆ ನೆಲೆಸಿರುವುದು ಅಪರೂಪ. ದೇಶದ ದಕ್ಷಿಣದ ತುತ್ತ ತುದಿಯಲ್ಲಿ ರಾವಣನೊಂದಿಗೆ ಯುದ್ಧಕ್ಕೆ ತೆರಳುವ ಮುಂಚೆ ರಾಮನು ಶಿವನನ್ನು ಪೂಜಿಸಿದ ಕ್ಷೇತ್ರ ರಾಮೇಶ್ವರವಾಗಿದ್ದರೆ, ತಾಲ್ಲೂಕಿನಲ್ಲಿ ಶ್ರೀರಾಮ ವನವಾಸದ ಕಾಲದಲ್ಲಿ ಪೂಜಿಸಲೆಂದು ಸ್ಥಾಪಿಸಿದ್ದ ಇಷ್ಟಲಿಂಗವಿರುವ ಕ್ಷೇತ್ರ ರಾಮಲಿಂಗೇಶ್ವರವೆಂದೇ ಪ್ರಸಿದ್ಧವಾಗಿದೆ. ಶಾಸಕ ಎಂ.ರಾಜಣ್ಣ ರಥೋತ್ಸವಕ್ಕೆ ಚಾಲನೆ ನೀಡಿದರು.
ರಾಮಲಿಂಗೇಶ್ವರ ಬೆಟ್ಟ ಪುರಾತನವಾದ ಹಾಗೂ ಪ್ರಸಿದ್ಧಿಪಡೆದ ಕ್ಷೇತ್ರವಾಗಿದೆ. ಬೆಟ್ಟದ ಮೇಲಿನ ದೇವಾಲಯ ಹಾಗೂ ಪರಿಸರ ಹಲವು ವಿಶೇಷತೆಗಳನ್ನು ಹೊಂದಿದ್ದು, ಬ್ರಹ್ಮರಥೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ವಿವಿಧ ತಾಲ್ಲೂಕು ಹಾಗೂ ಜಿಲ್ಲೆಗಳಿಂದ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು.
ಭಕ್ತರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ರಥೋತ್ಸವದ ಸಂದರ್ಭಕ್ಕೆ ದನಗಳ ಜಾತ್ರೆಯು ಕೂಡ ನಡೆಯಿತು. ರಾಸುಗಳನ್ನು ಕೊಳ್ಳಲು ಮತ್ತು ಮಾರಲು ಸುತ್ತಮುತ್ತಲಿನ ಜಿಲ್ಲೆಗಳಿಂದ ರೈತರು ಆಗಮಿಸಿದ್ದರು.
ರಾಮಾಯಣದ ಹಿನ್ನೆಲೆ, ಚೋಳರ ಕಾಲದ ಕೆತ್ತನೆಗಳುಳ್ಳ ದೇಗುಲ, ನೂರಾರು ವರ್ಷಗಳ ಇತಿಹಾಸ ಸಾರುವ ಶಿಲ್ಪಗಳು, ಸಾವಿರಾರು ವರ್ಷದಿಂದ ಕದಲದೇ ಇರುವ ಬೆಟ್ಟ, ದೇವಾಲಯ ಮುಜರಾಯಿಯದ್ದಾದರೂ, ಪ್ರತಿವರ್ಷ ಜನವರಿ ತಿಂಗಳ ಶುಕ್ಲ ಪಕ್ಷದ ಚತುರ್ದಶಿಯಂದು ನಡೆಯುವ ಬ್ರಹ್ಮರಥೋತ್ಸವದ ನಿರ್ವಹಣೆಯನ್ನು ದೇವಾಲಯ ಸಂಚಾಲಕರಾದ ಎಂ.ಸುನೀತ ಶ್ರೀನಿವಾಸರೆಡ್ಡಿ ಮತ್ತು ಕುಟುಂಬದವರು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.
ಸಾಕಷ್ಟು ದೂರಕ್ಕೇ ಕಾಣಬಲ್ಲ ಅತಿ ಎತ್ತರವಾದ ಧ್ವಜಸ್ತಂಭ, ದೊಡ್ಡದಾದ ಏಕಶಿಲಾ ಬಸವಣ್ಣ ಈ ದೇವಾಲಯದ ವೈಶಿಷ್ಟ್ಯ. ಬೇರೆಲ್ಲಿಯೂ ಕಾಣಸಿಗದ ಹನುಮಲಿಂಗ ದೇವಾಲಯ ಕೂಡ ಇಲ್ಲಿದೆ. ರಾಮದೊಣೆ, ಲಕ್ಷ್ಮಣದೊಣೆ ಮತ್ತು ಸೀತಾದೊಣೆಗಳೆಂಬ ನೀರಿನ ಸೆಲೆಗಳಾದ ದೊಣೆಗಳಿಲ್ಲಿವೆ. ಇವುಗಳಲ್ಲಿ ಸದಾ ನೀರು ತುಂಬಿರುತ್ತವೆ. ಅವುಗಳನ್ನು ರಾಮ ನಿರ್ಮಿಸಿದ್ದನೆಂಬ ಪ್ರತೀತಿಯಿದೆ. ಭಕ್ತರು ಅವುಗಳಿಂದ ನೀರನ್ನು ಮೊಗೆದು ತಲೆಗೆ ಸಿಂಪಡಿಸಿಕೊಳ್ಳುತ್ತಿದ್ದರು.
- Advertisement -
- Advertisement -
- Advertisement -
- Advertisement -