ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಕೊರೊನಾ ಸೋಂಕು ನಿಯಂತ್ರಿಸಲು ಕಠಿಣ ಕ್ರಮ ಕೈಗೊಂಡಿದೆ. ಬಿಜೆಪಿ ಪಕ್ಷದಿಂದ ಈಗಾಗಲೇ 1.5 ಕೋಟಿ ಜನಗಳಿಗೆ ಆಹಾರ ಸಾಮಾಗ್ರಿಗಳು ವಿತರಿಸಿದ್ದೇವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ತಿಳಿಸಿದರು.
ಬುಧವಾರ ನಗರದ ಹೊರವಲಯದ ಹಂಡಿಗನಾಳದ ಬಾಲಾಜಿ ಕಲ್ಯಾಣಮಂಟಪದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ಕೊರೊನಾ ಸೋಂಕು ನಿಯಂತ್ರಿಸಲು ಪರಿಕರಗಳ ಖರೀದಿಯಲ್ಲಿ ಭ್ರಷ್ಟಚಾರ ನಡೆದಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ನಮ್ಮ ಸಚಿವರು ಈಗಾಗಲೇ ಉತ್ತರಿಸಿದ್ದಾರೆ. ಭ್ರಷ್ಟಚಾರ ಮಾಡಿ ಯಾರು ಎಲ್ಲಿಗೆ ಹೋಗಿ ಬಂದಿದ್ದಾರೆ ಎಂಬುದು ರಾಜ್ಯದ ಜನರಿಗೆ ತಿಳಿದಿದೆ ಎಂದು ಲೇವಡಿ ಮಾಡಿದರು.
ಕರೊನಾ ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಲು ಬೂತ್ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ರಾಜ್ಯಾದ್ಯಂತ ಪ್ರವಾಸವನ್ನು ಕೈಗೊಳ್ಳಲು ನಿರ್ಧರಿಸಿ ಈಗಾಗಲೇ ಮೈಸೂರು ಭಾಗದಲ್ಲಿ ಪ್ರವಾಸವನ್ನು ಮುಗಿಸಿ, ಕೋಲಾರ ಜಿಲ್ಲಾ ಭಾಗದಲ್ಲಿ ಪ್ರವಾಸವನ್ನು ಕೈಗೊಂಡು, ಚಿಕ್ಕಬಳ್ಳಾಪುರ ಜಿಲ್ಲಾ ಪದಾಧಿಕಾರಿಗಳ ಸಭೆಗಳನ್ನು ನಡೆಸಿದ್ದೇನೆ ಎಂದರು.
ರಾಜ್ಯದಲ್ಲಿ ತಜ್ಞರ ಸಲಹೆಯಂತೆ ಲಾಕ್‌ಡೌನ್ ತೆರವುಗೊಳಿಸಲಾಗಿದೆ. ಇದರಿಂದ ಕೊರೊನಾ ಸೋಂಕು ಹೆಚ್ಚಳವಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಸರ್ಕಾರದ ನಿರ್ಧಾರವನ್ನು ಪಕ್ಷ ಸ್ವಾಗತಿಸುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಪಕ್ಷದ ಕಾರ್ಯಕರ್ತರು ಹಗಲಿರುಳು ಶ್ರಮಿಸಿ ಅವರಿಗೆ ಸಾಥ್ ನೀಡುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ, ಮಾಜಿ ಅಧ್ಯಕ್ಷ ಡಾ.ಮಂಜುನಾಥ್, ಶಿಡ್ಲಘಟ್ಟ ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರಗೌಡ, ನಗರ ಮಂಡಲ ಅಧ್ಯಕ್ಷ ರಾಘವೇಂದ್ರ, ಬಿ.ಸಿ.ನಂದೀಶ್, ರಮೇಶ್ ಬಾಯಿರಿ ಹಾಗೂ ಜಿಲ್ಲಾ ಪದಾಧಿಕಾರಿಗಳು ಹಾಜರಿದ್ದರು.