ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬುಧವಾರ ಪಟ್ಟಣದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ತಾಲ್ಲೂಕು ಈಗಾಗಲೇ ಬರಗಾಲ ಪೀಡಿತವಾಗಿದ್ದು, ರೈತರ ಸಂಕಷ್ಟವನ್ನು ಅರ್ಥ ಮಾಡಿಕೊಳ್ಳದೆ ರೈತರ ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸಲು ಮುಂದಾಗಿದೆ. ಇದರಿಂದಾಗಿ ರೈತರ ಹೊಟ್ಟೆ ಮೇಲೆ ಬರೆ ಎಳೆಯುವಂತಾಗಿದೆ. ಸಮರ್ಪಕ ವಿದ್ಯುತ್ ಇಲ್ಲದಿದ್ದರೂ ಅತ್ಯಲ್ಪ ನೀರಿನಲ್ಲಿ ಬೆಳೆಯನ್ನು ಬೆಳೆಯಲು ರೈತರು ಹರಸಾಹಸ ಪಡುತ್ತಿದ್ದಾರೆ. ಸಾಲದ ಸುಳಿಗೆ ಸಿಲುಕಿರುವ ರೈತರಿಗೆ ತೊಂದರೆ ಕೊಡಬೇಡಿ. ಇಲಾಖೆಯು ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವುದನ್ನು ನಿಲ್ಲಿಸದಿದ್ದಲ್ಲಿ ರೈತರು ಬೀದಿಗಿಳಿದು ಉಗ್ರವಾಗಿ ಹೋರಾಡಬೇಕಾಗುತ್ತದೆ ಎಂದು ತಿಳಿಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ ರೈತರು ಬೆಸ್ಕಾಂ ಕಚೇರಿಯ ಮುಂದೆ ಧರಣಿ ನಡೆಸಿದರು. ಬೆಸ್ಕಾಂ ಕಾರ್ಯನಿರ್ವಾಹಕ ಸಹಾಯಕ ಎಂಜಿನಿಯರ್ಗೆ ಮನವಿ ಪತ್ರವನ್ನು ನೀಡಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಮುನಿನಂಜಪ್ಪ, ಕೃಷ್ಣಪ್ಪ, ಶ್ರೀರಾಮಪ್ಪ, ನಾಗರಾಜ್, ಅಬ್ಲೂಡು ಆರ್.ದೇವರಾಜ್, ಎಂ.ದೇವರಾಜ್, ಆಂಜನೇಯರೆಡ್ಡಿ, ವೇಣುಗೋಪಾಲ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.