ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಎ.ಎನ್.ಮುನಿನಾರಾಯಣಪ್ಪ ಅವರ ಹೊಲದಲ್ಲಿ ಮಂಗಳವಾರ ಭೂ ಚೇತನ ಯೋಜನೆಯಡಿಯಲ್ಲಿ ರಾಗಿ ಬೆಳೆ ಕ್ಷೇತ್ರೋತ್ಸವವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಸಮಗ್ರ ಪೋಷಕಾಂಶಗಳ ನಿರ್ವಹಣೆ, ತಳಿ ಬದಲಾವಣೆ, ಮಣ್ಣು ಹಾಗೂ ನೀರು ಸಂರಕ್ಷಣಾ ಕ್ರಮಗಳನ್ನು ಅನುಸರಿಸಿ ಬೆಳೆ ಉತ್ಪಾದನೆ ಹೆಚ್ಚಿಸಲು ತಾಂತ್ರಿಕ ಮಾಹಿತಿಗಳನ್ನು ತಿಳಿಸಿದರು.
ಕೃಷಿ ಇಲಾಖೆಯ ಉಪನಿರ್ದೇಶಕಿ ಅನುರೂಪ ಮಾತನಾಡಿ,‘ಶೇಕಡಾ 70 ರಿಂದ 80 ಭಾಗ ಮಳೆಯಾಶ್ರಿತ ಪ್ರದೇಶದಲ್ಲಿ ಒಣಬೇಸಾಯವನ್ನು ನಡೆಸಲಾಗುತ್ತಿದೆ. ಅದರ ಉತ್ಪಾದನೆಯನ್ನು ಹೆಚ್ಚಿಸಲು ಭೂ ಚೇತನ ಯೋಜನೆಯನ್ನು ರೂಪಿಸಲಾಗಿದೆ. ನಮ್ಮ ಭಾಗದ ಮಣ್ಣಿನಲ್ಲಿ ಸಾವಯವ ಗೊಬ್ಬರದ ಅಂಶವು ಕಡಿಮೆಯಿರುವುದು ಮಣ್ಣಿನ ಪರೀಕ್ಷೆಯಿಂದ ತಿಳಿದುಬಂದಿದೆ. ಇದರಿಂದ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ, ಬೆಳೆಗೆ ಪೂರಕವಾದ ಜೀವಾಣುಗಳ ಕೊರತೆಯನ್ನು ಎದುರಿಸುತ್ತಿದೆ. ದನಕರುಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಈಗ ಕೊಟ್ಟಿಗೆ ಗೊಬ್ಬರದ ಬೆಲೆಯೂ ಗಗನಕ್ಕೇರಿದೆ. ಈ ಎಲ್ಲಾ ಅಂಶಗಳು ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಒಟ್ಟಾರೆಯ ಉತ್ಪಾದನೆಯ ಕೊರತೆಯುಂಟಾಗಿದೆ’ ಎಂದು ತಿಳಿಸಿದರು.
ಅಪ್ಪೇಗೌಡನಹಳ್ಳಿ ಗ್ರಾಮದ ಎ.ಎನ್.ಮುನಿನಾರಾಯಣಪ್ಪ, ತಮ್ಮ ಅನುಭವಗಳನ್ನು ವಿವರಿಸುತ್ತಾ, ಹಿಂದೆ ಎತ್ತುಗಳನ್ನು ಬಳಸಿ ಭೂಮಿಯನ್ನು ಉಳುಮೆಮಾಡಲಾಗುತ್ತಿತ್ತು. ಆದರೆ ಈಗ ಟ್ರಾಕ್ಟರ್ನ ಕಲ್ಟಿವೇಟರ್ ಮೂಲಕ ಉಳುಮೆ ಮಾಡಿ ಬೇಕಾಬಿಟ್ಟಿ ವ್ಯವಸಾಯ ಮಾಡುವುದರಿಂದ ಇಳುವರಿ ಕ್ಷೀಣಿಸುತ್ತಿದೆ. ಭೂಮಿಯನ್ನು ಸಮಯಕ್ಕನುಗುಣವಾಗಿ ಹದವಾಗಿ ಟ್ರಾಕ್ಟರ್ನ ಡಿಸ್ಕ್ ಬಳಸಿ ಉಳುಮೆ ಮಾಡಿದ್ದಲ್ಲಿ ಮಳೆ ಏರುಪೇರಾದರೂ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇರಬಲ್ಲದು. ಇದರಿಂದ ಇಳುವರಿ ಹೆಚ್ಚುತ್ತದೆ ಎಂದು ಹೇಳಿದರು.
ಕೃಷಿ ಸಹಾಯಕ ನಿರ್ದೇಶಕ ದೇವೇಗೌಡ, ಆತ್ಮಾ ತಾಂತ್ರಿಕ ಅಧಿಕಾರಿ ಅಶ್ವತ್ಥನಾರಾಯಣ, ರಾಮಣ್ಣ, ರಾಮಾಂಜಿನಪ್ಪ, ಅಪ್ಪಾಜಿಗೌಡ, ಪ್ರಕಾಶ್, ಮಂಜುನಾಥ್, ಆನಂದ್, ಕೃಷ್ಣ, ಪಟಾಲಪ್ಪ, ತ್ಯಾಗರಾಜ್, ಅನುವುಗಾರ ರಾಮಾಂಜಿನಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -