ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ಸುಮಾರು 50 ಮಂದಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಮಂಗಳವಾರ ತಾಲ್ಲೂಕಿನ ಹಿತ್ತಲಹಳ್ಳಿಗೆ ಭೇಟಿ ನೀಡಿದ್ದರು.
ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಭಾರತೀಯ ಕೃಷಿ ಪದ್ಧತಿ ಮತ್ತು ಅದರ ಆರ್ಥಿಕತೆ ಒಂದು ವಿಷಯವಾಗಿದೆ. ಕಾಲೇಜಿನಲ್ಲಿ ಕಲಿಯುವ ಪಾಠದ ಜೊತೆ ರೈತರ ಅನುಭವ, ಪರಿಶ್ರಮ, ಆರ್ಥಿಕ ಪ್ರಗತಿ, ಸಮಸ್ಯೆಗಳು, ಅದರೊಂದಿಗಿನ ವಾಣಿಜ್ಯ ಸಂಬಂಧಗಳನ್ನು ಅರಿಯಲು ತಾಲ್ಲೂಕಿನ ಹಿತ್ತಲಹಳ್ಳಿಯ ಎಚ್.ಜಿ.ಗೋಪಾಲಗೌಡ ಅವರ ತೋಟಕ್ಕೆ ಭೇಟಿ ನೀಡಿ ಹಿಪ್ಪುನೇರಳೆ ಬೇಸಾಯ, ರೇಷ್ಮೆ ಗೂಡನ್ನು ಉತ್ಪಾದನೆ, ಹನಿನೀರಾವರಿ ಬಳಸಿ ಕಡಿಮೆ ನೀರಿನಲ್ಲಿ ನಡೆಸುವ ಕೃಷಿ ಪದ್ಧತಿ, ಮಳೆಯಾಶ್ರಿತ ಸಮಗ್ರ ಬೇಸಾಯ ಪದ್ಧತಿಗಳನ್ನು ವೀಕ್ಷಿಸಿ ಮಾಹಿತಿ ಪಡೆದರು.
ಸಾವಯವ ಪದ್ಧತಿ ಮತ್ತು ರಾಸಾಯನಿಕ ಪದ್ಧತಿ ಕೃಷಿಗೆ ಸಂಬಂಧಿಸಿದಂತೆ, ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ವಿದ್ಯಾರ್ಥಿನಿಯರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ಜೇನು ಸಾಕಾಣಿಕೆ, ಕೋಳಿ, ಕುರಿ ಸಾಕಾಣಿಕೆ, ಹೈನುಗಾರಿಕೆ, ರೇಷ್ಮೆ ಕೃಷಿ, ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಲು ಬಳಸುವ ಕ್ರಮಗಳು, ನೀರಿನ ಸದುಪಯೋಗ, ಮನೆಯಲ್ಲಿ ಬಳಸಿರುವ ನೀರನ್ನು ತೋಟಕ್ಕೆ ಹರಿಸುವುದು, ಮಳೆಯಾಶ್ರಿತವಾಗಿ ವಿವಿಧ ಬೆಳೆ ಬೆಳೆಯಲು ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ರೈತ ಎಚ್.ಜಿ.ಗೋಪಾಲಗೌಡ ವಿವರಿಸಿದರು.
ರೇಷ್ಮೆ ವರ್ಷದಲ್ಲಿ ಎಷ್ಟು ಬೇಳೆ ಬೆಳೆಯುತ್ತೀರಿ, ಮಾರಾಟದ ಅನುಭವ, ರೈತಕೂಟಗಳ ಉಪಯೋಗ, ಅಧಿಕಾರಿಗಳಿಂದ ಸಿಗುವ ಸಹಾಯಧನ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಪಡೆದರು.
ರೇಷ್ಮೆ ಹುಳು ಸಾಕಾಣಿಕಾ ಮನೆಯಲ್ಲಿ ಹುಳು ಗೂಡು ಕಟ್ಟುವುದನ್ನು ನೋಡಿ ವಿದ್ಯಾರ್ಥಿಗಳು ಆ ಗೂಡನ್ನು ಮಾರಾಟ ಮಾಡುವ ಪಟ್ಟಣದ ರೇಷ್ಮೆ ಗೂಡಿನ ಮಾರುಕಟ್ಟೆಗೂ ಭೇಟಿ ನೀಡಿ ಅಲ್ಲಿನ ವಹಿವಾಟನ್ನು ಗಮನಿಸಿದರು. ರೇಷ್ಮೆ ಹುಳುಗಳ ಚಾಕಿ, ಅವುಗಳ ಬೆಳವಣಿಗೆ, ಗೂಡು ಕಟ್ಟುವ ವಿಧಾನ, ಗೂಡಿನ ನಂತರ ನೂಲುಬಿಚ್ಚಾಣಿಕೆ, ಪೀಪಾಗಳ ನಿರ್ವಹಣೆ ಹಾಗೂ ರೈತರು ಮತ್ತು ರೀಲರುಗಳಿಗೆ ನೀಡುತ್ತಿರುವ ಸೌಲಭ್ಯಗಳು, ಪ್ರತಿದಿನದ ವಹಿವಾಟುಗಳ ಬಗ್ಗೆ ಮಾರುಕಟ್ಟೆಯ ಉಪನಿರ್ದೇಶಕ ನರಸಿಂಹಮೂರ್ತಿ ಅವರಿಂದ ಮಾಹಿತಿ ಪಡೆದರು.
‘ನಮ್ಮ ಕಾಲೇಜಿನಲ್ಲಿ ರಾಜ್ಯ ಮಟ್ಟದ ಸೆಮಿನಾರ್ ನಡೆಸಿದ್ದೆವು. ಅದರಲ್ಲಿ ಕೃಷಿ ಸಚಿವ ಕೃಷ್ಣ ಬೈರೇಗೌಡ, ಕೃಷಿ ವಿಶ್ವವಿದ್ಯಾಲಯದ ಕುಲಪತಿ ನಾರಾಯಣಗೌಡ ಹಾಗೂ ವಿವಿಧ ವಿಜ್ಞಾನಿಗಳು ಆಗಮಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಸಂವಾದಿಸಿದ್ದರು. ವಿದ್ಯಾರ್ಥಿಗಳಿಗೆ ಈ ವಿವಿಧ ಕ್ಷೇತ್ರ ಪರಿಣಿತರ ಜ್ಞಾನದೊಂದಿಗೆ ಪ್ರಗತಿಪರ ರೈತರ ಜ್ಞಾನದ ಅಗತ್ಯವೂ ಇದೆ ಅನಿಸಿತ್ತು. ಅದಕ್ಕಾಗಿ ವಿದ್ಯಾರ್ಥಿಗಳನ್ನು ಹಿತ್ತಲಹಳ್ಳಿಗೆ ಕರೆತಂದೆವು. ರೈತ ಹುಟ್ಟುವಾಗಲೇ ಸಾಲದಿಂದ ಹುಟ್ಟಿ ಸಾಯುವಾಗಲೂ ಸಾಲವನ್ನು ಹೊತ್ತೇ ಸಾಯುತ್ತಾನೆ ಎಂದು ಹೇಳುತ್ತಾರೆ. ಅದನ್ನು ಸುಳ್ಳು ಮಾಡಿರುವ ರೈತರ ಬಗ್ಗೆ ವಿದ್ಯಾರ್ಥಿಗಳು ಅರಿಯಬೇಕು. ದೇಶದ ಆರ್ಥಿಕತೆ ರೈತರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಅವರ ಕಷ್ಟ, ಅದಕ್ಕೆ ಪರಿಹಾರ ಎಲ್ಲವೂ ವಿದ್ಯಾರ್ಥಿಗಳು ತಿಳಿಯಬೇಕು. ದೇಶದ ಬೆನ್ನೆಲುಬಾದ ರೈತರ ಬಗ್ಗೆ ವಿದ್ಯಾರ್ಥಿಗಳಲ್ಲಿ ಅವಗಾಹನೆ ಬೆಳೆಸುವುದು ನಮ್ಮ ಉದ್ದೇಶ’ ಎಂದು ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶಾಲಿನಿ ಪೂಜಾರಿ ತಿಳಿಸಿದರು.
ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಸುನಂದಾ, ಗೋವಿಂದೇಗೌಡ, ಕೃಷಿ ಅಧಿಕಾರಿ ರಾಮ್ಕುಮಾರ್, ತೋಟಗಾರಿಕಾ ಅಧಿಕಾರಿ ರವಿಕುಮಾರ್, ಸತೀಶ್ಕುಮಾರ್, ರೈತರಾದ ಬೋದಗೂರು ವೆಂಕಟಸ್ವಾಮಿರೆಡ್ಡಿ, ರಾಮಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.