Home News ಮೊಳಕೆಯೊಡೆಯುವ ಹಂತದಲ್ಲಿಯೇ ಕಮರಿ ಹೋಗಿರುವ ಬೆಳೆ

ಮೊಳಕೆಯೊಡೆಯುವ ಹಂತದಲ್ಲಿಯೇ ಕಮರಿ ಹೋಗಿರುವ ಬೆಳೆ

0

ಎರಡು ತಿಂಗಳಿಂದ ತಾಲ್ಲೂಕಿನಲ್ಲಿ ಸರಿಯಾಗಿ ಮಳೆ ಇಲ್ಲ. ಕಳೆದೊಂದು ವಾರದಿಂದ ಮೋಡಕವಿದ ವಾತಾವರಣವಿದ್ದರೂ ಮಳೆಯ ಕೊರತೆ ಮುಂದುವರಿದಿದೆ. ತಾಲ್ಲೂಕಿನಲ್ಲಿ ಕೆಲವು ಕಡೆ ಬೆಳೆ ಮೊಳಕೆಯೊಡೆಯುವ ಹಂತದಲ್ಲಿಯೇ ಕಮರಿ ಹೋಗಿವೆ. ಬಹಳಷ್ಟು ಕಡೆ ಸರಿಯಾಗಿ ಮಳೆಯಾಗದ ಕಾರಣ ಬೆಳವಣಿಗೆ ಕುಂಠಿತಗೊಂಡಿದೆ.
ತಾಲ್ಲೂಕಿನಲ್ಲಿ 17,900 ಹೆಕ್ಟೇರ್ ಪ್ರದೇಶದ ಪೈಕಿ 16,888 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬಿತ್ತನೆ ಆಗದೆ ಉಳಿದಿರುವುದು 1,300 ಹೆಕ್ಟೇರ್ ಆದರೆ, ಮೊಳಕೆ ಬರದೆ ಮರುಬಿತ್ತನೆ ಮಾಡಿರುವುದು 6,000 ಹಕ್ಟೇರ್ ಪ್ರದೇಶವಾಗಿದೆ.
ರಾಗಿ 12,300 ಹೆಕ್ಟೇರ್, ನೆಲಗಡಲೆ 1,000 ಹೆಕ್ಟೇರ್, ಜೋಳ 1,700 ಹೆಕ್ಟೇರ್, ತೊಗರಿ 814 ಹೆಕ್ಟೇರ್, ಅವರೆ 610 ಹೆಕ್ಟೇರ್, ತೃಣಧಾನ್ಯಗಳು 400 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ನಷ್ಟ ಪ್ರಮಾಣವನ್ನು ಶೇಕಡಾ 70 ರಷ್ಟೆಂದು ಅಂದಾಜಿಸಲಾಗಿದೆ.
‘ನಮ್ಮ ತಾಲ್ಲೂಕಿನ ಸಾದಲಿ ಮತ್ತು ಬಶೆಟ್ಟಹಳ್ಳಿ ಹೋಬಳಿಯಲ್ಲಿ ಮೊದಲು ಬಿತ್ತನೆ ನಡೆಸಲಾಗುತ್ತದೆ, ನಂತರ ಕಸಬಾ ಮತ್ತು ಜಂಗಮಕೋಟೆ ಹೋಬಳಿಯ ಭಾಗದಲ್ಲಿ ಬಿತ್ತನೆ ನಡೆಸಲಾಗುತ್ತದೆ. ಆದರೆ ಮಳೆ ಅಭಾವದಿಂದಾಗಿ ತಾಲ್ಲೂಕಿನ ಅನೇಕ ಕಡೆಗಳಲ್ಲಿ ಬೆಳೆಗಳು ಹಾಳಾಗಿವೆ. ಕೆಲ ಕಡೆ ಜೀವ ಹಿಡಿದುಕೊಂಡಿರುವ ಬೆಳೆಗಳೂ ಬರುವ ಖಾತರಿ ಇಲ್ಲ. ಬಂದರೂ ಇಳುವರಿಯಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಕುಂಠಿತವಾಗುವ ಭೀತಿ ರೈತರನ್ನು ಕಾಡುತ್ತಿದೆ‘ ಎಂದು ಕೃಷಿ ಸಹಾಯಕ ನಿರ್ದೇಶಕ ದೇವೇಗೌಡ ತಿಳಿಸಿದರು.
‘ಸಾಲ ಮಾಡಿ ಬಿತ್ತನೆ ಮಾಡಿರುವ ರೈತರು ಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಕೂಲಿ ಕಾರ್ಮಿಕರು ಕೆಲಸ ಇಲ್ಲದೆ ಗುಳೆ ಹೊರಟಿದ್ದಾರೆ. ಕಳೆದ ಸಾಲಿನ ಬರದ ಬರ ಮಾಸುವ ಮುನ್ನ ಈಗ ಮತ್ತೆ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಉಲ್ಬಣಿಸಿದೆ. ಕೊಳವೆ ಬಾವಿ, ಕೆರೆಗಳು ಸೇರಿದಂತೆ ಎಲ್ಲಡೆ ನೀರಿನ ಮೂಲ ಬತ್ತಿ ಹೋಗಿವೆ. ಹೀಗಾಗಿ ಜನ ಹನಿ ನೀರಿಗೂ ಪರದಾಡುವ ಸ್ಥಿತಿ ಬಂದಿದೆ. ಬರುವ ಬೇಸಿಗೆ ಭೀಕರವಾಗಲಿದೆ‘ ಎಂದು ತಿಳಿಸುತ್ತಾರೆ ರೈತ ಅನುವುಗಾರ ಇದ್ಲೂಡು ರಾಮಾಂಜಿನಪ್ಪ.