ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಮಂಗಳವಾರ ಗಂಗಾದೇವಿ ರಥೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ವಿಜಯನಾಮ ಸಂವತ್ಸರದ ಚೈತ್ರ ಶುದ್ಧ ಪೂರ್ಣಿಮೆ ಮಂಗಳವಾರ ಮಧ್ಯಾಹ್ನ ಗ್ರಾಮಸ್ಥರೆಲ್ಲರು ಪೂಜೆ ಸಲ್ಲಿಸಿ ವಿಶೇಷವಾಗಿ ಅಲಂಕರಿಸಿದ್ದ ದೇವಿಯ ರಥವನ್ನು ಗ್ರಾಮದಲ್ಲೆಲ್ಲಾ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ವಿವಿಧ ರೀತಿಯ ತಮಟೆ ನಾದ, ಡೊಳ್ಳು ಕುಣಿತ ಹಾಗೂ ಕಲಾ ತಂಡಗಳೊಂದಿಗೆ ಸಾಗಿದ ರಥವನ್ನು ಎಲ್ಲರೂ ಸೇರಿ ಎಳೆದರು. ದವನ ಸಿಕ್ಕಿಸಿದ ಬಾಳೆಹಣ್ಣನ್ನು ರಥಕ್ಕೆ ಎಸೆದು ಜನರು ಪ್ರಾರ್ಥಿಸಿದರು.
ಸುತ್ತಮುತ್ತಲಿನ ಗ್ರಾಮಗಳಿಂದ ಕುಟುಂಬ ಸಮೇತ ಆಗಮಿಸಿದ್ದ ಭಕ್ತರು ಗ್ರಾಮ ದೇವತೆ ಗಂಗಾದೇವಿ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ನಂತರ ರಥವನ್ನು ಎಳೆದರು. ಗಂಗಾದೇವಿಯನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು.
ಬೆಲೂನು, ಬತ್ತಾಸು ಮಕ್ಕಳ ಆಕರ್ಷಣೆಯಾಗಿತ್ತು. ಹೆಸರು ಬೇಳೆ, ಪಾನಕ, ಮಜ್ಜಿಗೆ ಹಾಗೂ ಪ್ರಸಾದವನ್ನು ವಿತರಿಸಲಾಯಿತು. ಭಕ್ತರಿಗೆ ಅನ್ನಸಂತರ್ಪಣೆಯನ್ನೂ ಆಯೋಜಿಸಲಾಗಿತ್ತು.