ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಗುರುವಾರ ಸೀತಾರಾಮ ಲಕ್ಷ್ಮಣಮೂರ್ತಿ ಸಮೇತ ಆಂಜನೇಯಸ್ವಾಮಿ ಉತ್ಸವವನ್ನು ಅದ್ದೂರಿಯಾಗಿ ಭಜನೆಯೊಂದಿಗೆ ಮೆರವಣಿಗೆ ಮಾಡಲಾಯಿತು.
ಗ್ರಾಮದೆಲ್ಲೆಡೆ ಮೆರವಣಿಗೆ ನಡೆಸಿದ ದೇವರುಗಳಿಗೆ ಪ್ರತಿ ಮನೆಯವರೂ ಪೂಜೆ ಸಲ್ಲಿಸಿದರು. ಊತ್ಸವ ನಡೆಸಿದ ನಂತರ ದೇವಾಲಯದಲ್ಲಿ ಮಹಾಮಂಗಳಾರತಿ ಹಾಗೂ ಪ್ರಸಾದವನ್ನು ವಿತರಿಸಲಾಯಿತು. ಸುತ್ತಮುತ್ತಲಿನ ಗ್ರಾಮಸ್ಥರೂ ಪೂಜೆ ಹಾಗೂ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
‘ಧನುರ್ಮಾಸದಲ್ಲಿ ನಡೆಯುವ ಈ ಉತ್ಸವವನ್ನು ಪುರಾತನ ಕಾಲದಿಂದಲೂ ಗ್ರಾಮದಲ್ಲಿ ಎಲ್ಲರೂ ಒಗ್ಗೂಡಿ ನಡೆಸುತ್ತಾ ಬಂದಿದ್ದು, ಅದನ್ನು ಮುಂದುವರೆಸಿದ್ದೇವೆ. ಸಂಕ್ರಾಂತಿಯಂದು ಮುಕ್ತಾಯವಾಗುವ ಈ ಉತ್ವವದ ಕಡೆಯ ದಿನ ವಿಶೇಷ ಪೂಜೆ, ಅಲಂಕಾರ, ಪ್ರಸಾದ ವಿನಿಯೋಗ ಹಾಗೂ ಹಿರಿಯರಿಗೆ ಸನ್ಮಾನ ನಡೆಸುತ್ತೇವೆ’ ಎಂದು ಭಜನೆ ತಂಡದ ಹಿರಿಯರಾದ ಎಂ.ಎಂ.ಸ್ವಾಮಿ ತಿಳಿಸಿದರು.
ಭಜನೆ ತಂಡದ ಚೌಡಸಂದ್ರದ ಹನುಮಂತಪ್ಪ, ಬೆಳ್ಳೂಟಿ ಮುನಿಯಪ್ಪ, ಮುನೀಂದ್ರ, ಗೋಪಾಲ್ ಮತ್ತಿತರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.